ಮಂಗಳೂರು : ವಿಧಾನ ಪರಿಷತ್ತಿನ ಕಲಾಪದಲ್ಲಿ ಬುಧವಾರ (ಆ.19) ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು MRPL ಹಾಗೂ MSEZL ಕೈಗಾರಿಕಾ ವಲಯದ ಹಸಿರು ವಲಯಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಬಜ್ಪೆ ಶಾಂತಿಗುಡ್ಡೆ ಪ್ರದೇಶವನ್ನು ಸೇರ್ಪಡೆಗೊಳಿಸುವಂತೆ ಸರ್ಕಾರದ ಗಮನ ಸೆಳೆದರು.
MRPL ಹಾಗೂ MSEZL ವ್ಯಾಪ್ತಿಯಲ್ಲಿ 27 ಎಕರೆ ಪ್ರದೇಶವನ್ನು ಹಸಿರು ವಲಯಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಈಗಾಗಲೇ ನಿಗದಿಯಾಗಿರುವುದನ್ನು ಉಲ್ಲೇಖಿಸಿದ ಅವರು, ಕೈಗಾರಿಕಾ ವಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರದೇಶವನ್ನು ಹಸಿರು ವಲಯದ ವ್ಯಾಪ್ತಿಗೆ ತರುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಕೈಗಾರಿಕಾ ವಲಯಕ್ಕೆ ತಾಗಿಕೊಂಡಿರುವ ಬಜ್ಪೆ ಶಾಂತಿಗುಡ್ಡೆ (ಸರ್ವೆ ನಂ. 138/1) ಪ್ರದೇಶವನ್ನು ಪ್ರಸ್ತುತ ಭೂಸ್ವಾಧೀನ ಪ್ರಕ್ರಿಯೆಗೆ ಸೇರ್ಪಡೆಗೊಳಿಸಿ, ಹಸಿರು ವಲಯ ಅಭಿವೃದ್ಧಿಪಡಿಸುವಂತೆ ಅವರು ಆಗ್ರಹಿಸಿದರು.
ಸದನದ ಶೂನ್ಯವೇಳೆಯಲ್ಲಿ ಮಾನ್ಯ ಸಭಾಪತಿಯವರ ಮೂಲಕ ಸಂಬಂಧಪಟ್ಟ ಸಚಿವರ ಗಮನಕ್ಕೆ ಈ ವಿಷಯವನ್ನು ತಂದ ಐವನ್ ಡಿ’ಸೋಜಾ, ಕೈಗಾರಿಕಾ ಚಟುವಟಿಕೆಗಳಿಂದ ಉಂಟಾಗಬಹುದಾದ ಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡಲು ಹಸಿರು ವಲಯದ ವಿಸ್ತರಣೆ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಶಾಂತಿಗುಡ್ಡೆ ಪ್ರದೇಶವನ್ನು ಭೂಸ್ವಾಧೀನ ಪ್ರಕ್ರಿಯೆಗೆ ಸೇರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಹಾಗೂ ಸ್ಥಳೀಯ ಜನರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

