ಕಂಬಳ ಪ್ರೇಕ್ಷಕರಿಗೆ ಸಿಹಿಸುದ್ದಿ : ಕಂಬಳದಲ್ಲಿ ಕಾಣಿಸಲಿದೆ ಲೈವ್ ಟೈಮಿಂಗ್ಸ್, ದೊಡ್ಡ ಸ್ಕ್ರೀನ್‌ನಲ್ಲಿ ಅಂತಿಮ ಸಮಯ ಪ್ರದರ್ಶನಕ್ಕೆ ಹೊಸ ಪ್ರಯೋಗ..!

0
57

ಮಂಗಳೂರು : ತುಳುನಾಡಿನ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳದಲ್ಲಿ ತಂತ್ರಜ್ಞಾನದ ಬಳಕೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ಇನ್ನು ಮುಂದೆ ಕಂಬಳ ಸ್ಪರ್ಧೆಯಲ್ಲಿ ಕೋಣಗಳ ಓಟದ ಅಂತಿಮ ಸಮಯವನ್ನು ಪ್ರೇಕ್ಷಕರಿಗೆ ಲೈವ್ ಆಗಿ ದೊಡ್ಡ ಡಿಸ್‌ಪ್ಲೇ ಸ್ಕ್ರೀನ್‌ನಲ್ಲಿ ಪ್ರದರ್ಶಿಸುವ ಹೊಸ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ.

ಈಗಾಗಲೇ ಕಂಬಳದಲ್ಲಿ ಸೆಕೆಂಡಿನ ನೂರನೇ ಒಂದರಷ್ಟು ಅಂದರೆ 0.01 ಸೆಕೆಂಡ್‌ಗಳ ನಿಖರತೆಯಲ್ಲಿ ಕೋಣಗಳ ಓಟದ ಸಮಯ ದಾಖಲಿಸಿ ಫಲಿತಾಂಶ ಪ್ರಕಟಿಸಲಾಗುತ್ತಿದೆ. ಆದರೆ ಸ್ಪರ್ಧೆ ನಡೆಯುವ ವೇಳೆ ಈ ಸಮಯವನ್ನು ಕಂಬಳದ ವಿವಿಧ ಭಾಗಗಳಿಂದ ಪ್ರೇಕ್ಷಕರು ಸ್ಪಷ್ಟವಾಗಿ ವೀಕ್ಷಿಸಲು ಸೂಕ್ತ ವ್ಯವಸ್ಥೆ ಇರಲಿಲ್ಲ.

ಹೊಸ ವ್ಯವಸ್ಥೆ ಜಾರಿಗೆ ಬಂದರೆ, ಮಂಜೊಟ್ಟಿ ಸೇರಿದಂತೆ ಕಂಬಳದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗುವ ದೊಡ್ಡ ಡಿಸ್‌ಪ್ಲೇ ಸ್ಕ್ರೀನ್‌ಗಳಲ್ಲಿ ಓಟದಲ್ಲಿ ಭಾಗವಹಿಸಿದ ಕೋಣಗಳ ಹೆಸರು, ಯಜಮಾನರ ಹೆಸರು, ಓಟಗಾರರ ವಿವರ, ವಿವಿಧ ಸುತ್ತುಗಳಲ್ಲಿ ದಾಖಲಾದ ಸಮಯ ಹಾಗೂ ಅಂತಿಮ ಫಲಿತಾಂಶವನ್ನು ತಕ್ಷಣವೇ ಪ್ರದರ್ಶಿಸಲು ಸಾಧ್ಯವಾಗಲಿದೆ.

ಸಾಫ್ಟ್‌ವೇರ್ ಮೂಲಕ ಸಂಪೂರ್ಣ ಮಾಹಿತಿ

ಕಂಬಳದ ಕೋಣಗಳ ಯಜಮಾನರು, ಓಟಗಾರರು, ಕೋಣಗಳ ಹೆಸರು, ವಿವಿಧ ಸುತ್ತುಗಳಲ್ಲಿ ದಾಖಲಾದ ಸಮಯ ಹಾಗೂ ಫಲಿತಾಂಶ ಸೇರಿದಂತೆ ಅಗತ್ಯ ಮಾಹಿತಿಯನ್ನು ಒಳಗೊಂಡ ವಿಶೇಷ ಸಾಫ್ಟ್‌ವೇರ್ ಅನ್ನು ಆದಿತ್ಯ ಕರ್ಕೇರ ಅವರು ರೂಪಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಕಂಬಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಲೈವ್ ಸ್ಕೋರ್‌ಬೋರ್ಡ್ ಹಾಗೂ ಟೈಮಿಂಗ್ಸ್ ಡಿಸ್‌ಪ್ಲೇ ವ್ಯವಸ್ಥೆಯ ಮಾದರಿಯನ್ನು ಅನಾವರಣಗೊಳಿಸಲಾಗಿದೆ.

ಕಂಬಳದಲ್ಲಿ ಆರಂಭಿಕ ದಿನಗಳಲ್ಲಿ ಕೋಣಗಳು ಮಂಜೊಟ್ಟಿಯ ಫಿನಿಶ್‌ಲೈನ್ ತಲುಪಿದ ಸಮಯವನ್ನು ಕಣ್ಣಂದಾಜಿನ ಮೂಲಕ ನಿರ್ಧರಿಸಲಾಗುತ್ತಿತ್ತು. ಬಳಿಕ ಸ್ಟಾಪ್‌ವಾಚ್ ಬಳಕೆಯ ಮೂಲಕ ಸಮಯ ದಾಖಲಿಸುವ ಪದ್ಧತಿ ಜಾರಿಗೆ ಬಂತು.

ತಂತ್ರಜ್ಞಾನ ಅಭಿವೃದ್ಧಿಯಾದಂತೆ ವೀಡಿಯೋ ರೆಕಾರ್ಡಿಂಗ್ ಮೂಲಕ ಫಿನಿಶಿಂಗ್ ಪರಿಶೀಲಿಸುವ ವ್ಯವಸ್ಥೆ ಆರಂಭವಾಯಿತು. ನಂತರ ಫಿನಿಶ್‌ಲೈನ್ ಸೆನ್ಸಾರ್‌ಗಳನ್ನು ಅಳವಡಿಸಿ, ಓಟದ ಆರಂಭ ಮತ್ತು ಅಂತ್ಯವನ್ನು ಸೆನ್ಸಾರ್ ಆಧಾರಿತವಾಗಿ ದಾಖಲಿಸುವ ಮೂಲಕ 0.01 ಸೆಕೆಂಡ್‌ಗಳ ನಿಖರತೆಯಲ್ಲಿ ಫಲಿತಾಂಶ ನಿರ್ಧರಿಸುವ ವ್ಯವಸ್ಥೆ ಜಾರಿಗೆ ಬಂದಿದೆ.

2024ರಲ್ಲಿ ಆಟೋಮೇಟೆಡ್ ಟೈಮ್ ಗೇಟ್ ಹಾಗೂ ಫೋಟೋ ಫಿನಿಶ್ ರಿಸಲ್ಟ್ ಸಿಸ್ಟಮ್ ಅಳವಡಿಸಲಾಗಿತ್ತು. ಮಿಯಾರು ಕುದಿ ಕಂಬಳದಲ್ಲಿಯೂ ಫೋಟೋ ಫಿನಿಶ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು.

ಇದೀಗ ಓಟದ ಸಮಯ ಮತ್ತು ಫಲಿತಾಂಶವನ್ನು ದೊಡ್ಡ ಡಿಸ್‌ಪ್ಲೇ ಸ್ಕ್ರೀನ್‌ನಲ್ಲಿ ಲೈವ್ ಆಗಿ ಪ್ರದರ್ಶಿಸುವ ವ್ಯವಸ್ಥೆ ಜಾರಿಗೆ ಬಂದರೆ ಕಂಬಳದ ತೀರ್ಪು ಪ್ರಕ್ರಿಯೆಯಲ್ಲಿ ಮತ್ತಷ್ಟು ಪಾರದರ್ಶಕತೆ ಮೂಡುವ ನಿರೀಕ್ಷೆಯಿದೆ. ಜತೆಗೆ ಸಾವಿರಾರು ಪ್ರೇಕ್ಷಕರಿಗೆ ಸ್ಪರ್ಧೆಯ ಸಮಯ ಮತ್ತು ಫಲಿತಾಂಶವನ್ನು ಸ್ಥಳದಲ್ಲೇ ಸ್ಪಷ್ಟವಾಗಿ ತಿಳಿದುಕೊಳ್ಳಲು ಅನುಕೂಲವಾಗಲಿದೆ. ತಂತ್ರಜ್ಞಾನ ಮತ್ತು ಜಾನಪದ ಕ್ರೀಡೆಯ ಈ ಸಂಯೋಜನೆ ಕಂಬಳದ ಆಧುನೀಕರಣಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆ ಮೂಡಿಸಿದೆ.