ಮಿಲಾಗ್ರೆಸ್ ಕಾಲೇಜಿನಲ್ಲಿ ಅಂಗಾಂಗ ದಾನ ಜಾಗೃತಿ ಹಾಗೂ ನೋಂದಣಿ ಅಭಿಯಾನ

0
4

ಮಂಗಳೂರು: ವಿಶ್ವ ಅಂಗಾಂಗ ದಾನ ದಿನಾಚರಣೆಯ ಅಂಗವಾಗಿ ಮಿಲಾಗ್ರೆಸ್ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಯೂತ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಜೀವಸಾರ್ಥಕತೆ ಮತ್ತು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (SOTTO) ಸಹಯೋಗದೊಂದಿಗೆ ಅಂಗಾಂಗ ದಾನ ಕುರಿತು ಜಾಗೃತಿ ಹಾಗೂ ನೋಂದಣಿ ಅಭಿಯಾನವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಮಾತನಾಡಿ, ಸಮಾಜದಲ್ಲಿ ಅಂಗಾಂಗ ದಾನದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವ ಅಗತ್ಯವಿದೆ ಎಂದು ಹೇಳಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ವಯಂಪ್ರೇರಿತರಾಗಿ ಅಂಗಾಂಗ ದಾನಕ್ಕೆ ನೋಂದಾಯಿಸಿಕೊಳ್ಳಬೇಕು. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಅಂಗಾಂಗ ದಾನದ ಮಹತ್ವದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಅವರು ಕರೆ ನೀಡಿದರು.

‘ಅಂಗಾಂಗ ದಾನ – ಜೀವದ ಉಡುಗೊರೆ’ ಕುರಿತು ಜಾಗೃತಿ

ಕರ್ನಾಟಕ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ (SOTTO) ಗ್ರಿಫ್ ಕೌನ್ಸೆಲರ್ ಹಾಗೂ ಟ್ರಾನ್ಸ್‌ಪ್ಲಾಂಟ್ ಸಂಯೋಜಕಿ ಶಿಲ್ಪಾ ಟಿ.ಯು. ಅವರು ‘ಅಂಗಾಂಗ ದಾನ – ಜೀವದ ಉಡುಗೊರೆ’ ಎಂಬ ವಿಷಯದ ಕುರಿತು ವಿಶೇಷ ಜಾಗೃತಿ ಉಪನ್ಯಾಸ ನೀಡಿದರು.

ಅಂಗಾಂಗ ದಾನದ ಮಹತ್ವ, ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಳ್ಳುವ ವಿಧಾನ ಹಾಗೂ ಅಂಗಾಂಗ ದಾನದ ಮೂಲಕ ಹಲವು ಮಂದಿಗೆ ಹೊಸ ಜೀವನ ನೀಡಲು ಸಾಧ್ಯವಾಗುವ ಕುರಿತು ಅವರು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಿಲಾಗ್ರೆಸ್ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಲ್ವಿನ್ ಸೆರಾವೊ ಮಾತನಾಡಿ, ಯುವಜನತೆ ಅಂಗಾಂಗ ದಾನದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಎಂದು ಹೇಳಿದರು. ಇಂತಹ ಜಾಗೃತಿ ಕಾರ್ಯಕ್ರಮಗಳು ಯುವಜನರ ಮೂಲಕ ಸಮಾಜದ ಹೆಚ್ಚಿನ ಜನರನ್ನು ತಲುಪಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ 22 ವಿದ್ಯಾರ್ಥಿಗಳು ಅಂಗಾಂಗ ದಾನಿಗಳಾಗಿ ನೋಂದಣಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯೂತ್ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್. ಹಾಗೂ ಐಕ್ಯೂಎಸಿ ಸಹ ಸಂಯೋಜಕಿ ಚೇತನಾ ಉಪಸ್ಥಿತರಿದ್ದರು.

ಯೂತ್ ರೆಡ್ ಕ್ರಾಸ್ ಕಾರ್ಯದರ್ಶಿ ಸಿಂಚನಾ ಸ್ವಾಗತಿಸಿದರು. ಯೂತ್ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಸುಷ್ಮಿತಾ ಶೈಲಾ ಮೊರಾಸ್ ವಂದನಾರ್ಪಣೆ ಸಲ್ಲಿಸಿದರು. ವಿದ್ಯಾರ್ಥಿ ಪ್ರಿನ್ಸೆಲ್ ಕಾರ್ಯಕ್ರಮ ನಿರೂಪಿಸಿದರು.

ಅಂಗಾಂಗ ದಾನದ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ, ಸ್ವಯಂಪ್ರೇರಿತ ಅಂಗಾಂಗ ದಾನಿಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಅಭಿಯಾನ ಮಹತ್ವದ ಹೆಜ್ಜೆಯಾಯಿತು.