ಪ್ರಥಮ ಚಿಕಿತ್ಸೆಯ ಕುರಿತು ಕಾರ್ಯಾಗಾರ

0
7

ಮಂಗಳೂರು : ಮಿಲಾಗ್ರಿಸ್ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗಾಗಿ “ಪ್ರಥಮ ಚಿಕಿತ್ಸೆ” ಕುರಿತು ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಯಿತು. ತುರ್ತು ಸಂದರ್ಭದಲ್ಲಿ ಅಪಾಯದಲ್ಲಿರುವ ವ್ಯಕ್ತಿಗೆ ತಕ್ಷಣದ ನೆರವು ನೀಡುವ ವಿಧಾನಗಳು, ಪ್ರಥಮ ಚಿಕಿತ್ಸೆಯ ಮಹತ್ವ ಹಾಗೂ ವಿವಿಧ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು.

ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಅನಸ್ತೇಶಿಯಾಲಜಿ ವಿಭಾಗದ ಸಹಪ್ರಾಧ್ಯಾಪಕಿ ಡಾ. ಹಿಲ್ದಾ ಶಾಂತಿನಿ ಹಾಗೂ ಇದೇ ವಿಭಾಗದ ಸೀನಿಯರ್ ರೆಸಿಡೆಂಟ್ ಡಾ. ಜೆಸಿಕಾ ಅಪ್ರಹಂ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆಯ ಕುರಿತು ಪ್ರಾಯೋಗಿಕ ಹಾಗೂ ಉಪಯುಕ್ತ ಮಾಹಿತಿಯನ್ನು ನೀಡಿದರು. ಅಪಘಾತ, ಗಾಯ, ಮೂರ್ಛೆ, ಉಸಿರಾಟದ ತೊಂದರೆ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಪ್ರಾಥಮಿಕ ಕ್ರಮಗಳ ಕುರಿತು ಅವರು ವಿವರಿಸಿದರು. ಅಗತ್ಯ ಸಂದರ್ಭದಲ್ಲಿ ಸಮಯಪ್ರಜ್ಞೆಯಿಂದ ನೀಡುವ ಪ್ರಥಮ ಚಿಕಿತ್ಸೆ ವ್ಯಕ್ತಿಯ ಜೀವ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶಪಾಲರಾದ ರೆ. ಡಾ ಆಲ್ವಿನ್ ಸೆರಾವೋ ಮಾತನಾಡಿ, ವಿದ್ಯಾರ್ಥಿಗಳಲ್ಲಿ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಆತ್ಮವಿಶ್ವಾಸ ಹಾಗೂ ಮಾನವೀಯ ಸೇವಾ ಮನೋಭಾವ ಬೆಳೆಸುವಲ್ಲಿ ಕಾರ್ಯಾಗಾರವು ಮಹತ್ವದ ಪಾತ್ರ ವಹಿಸಿತ್ತದೆ ಎಂದರು.

ಕಾರ್ಯಕ್ರಮದಲ್ಲಿ, ಉಪ ಪ್ರಾಂಶುಪಾಲೆ ಗ್ಲಾನ್ಸಿಯಾ ಫರ್ನಾಂಡಿಸ್, ಐಕ್ಯೂಎಸಿ ಸಂಯೋಜಕರಾದ ಚೇತನ ಕುಮಾರಿ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಗ್ರೀಷ್ಮ ನಿರೂಪಿಸಿದರು. ರೋವರ್ ರೇಂಜರ್ಸ್‌ನ ಸಂಯೋಜನಾಧಿಕಾರಿ ಲೆನಿಷಾ ಪೆರಿಸ್ ಸ್ವಾಗತಿಸಿದರು. ಯೂತ್ ರೆಡ್ ಕ್ರಾಸ್‌ನ ಸಂಯೋಜನಾಧಿಕಾರಿ ಶೈಲಾ ಮೋರಸ್ ವಂದಿಸಿದರು.