ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆಗೆ ಖಂಡನೆ: ಕಾನೂನು ಕ್ರಮಕ್ಕೆ ಆಗ್ರಹ

0
7

ಉಡುಪಿ: ಕುಂದಾಪುರದ ಹೋಟೆಲ್‌ನಲ್ಲಿ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ಸಹಬಾಳ್ವೆ ಉಡುಪಿ ಜಿಲ್ಲೆ ವೇದಿಕೆ ತೀವ್ರವಾಗಿ ಖಂಡಿಸಿದ್ದು, ಆರೋಪಿಯಾಗಿರುವ ಡಾ. ಮಹೇಂದ್ರ ಕುಮಾರ್ ಶೆಟ್ಟಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಆ.21ರಂದು ಕುಂದಾಪುರದ ಹೋಟೆಲ್‌ನಲ್ಲಿ ಪತ್ನಿ ಹಾಗೂ ಗೆಳೆಯರೊಂದಿಗೆ ಕುಳಿತಿದ್ದ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಡಾ. ಮಹೇಂದ್ರ ಕುಮಾರ್ ಶೆಟ್ಟಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.

ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಶ್ರೀಕಾಂತ್ ಅವರು ವರದಿ ಮಾಡಿದ್ದಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪತ್ರಕರ್ತರಾಗಿ ತಮ್ಮ ಕರ್ತವ್ಯ ನಿರ್ವಹಿಸಿದ ಕಾರಣಕ್ಕೆ ಹಲ್ಲೆ ನಡೆದಿರುವುದು ಆತಂಕಕಾರಿ ಸಂಗತಿ ಎಂದು ಸಹಬಾಳ್ವೆ ಉಡುಪಿ ಜಿಲ್ಲೆ ಅಭಿಪ್ರಾಯಪಟ್ಟಿದೆ.

ಭ್ರಷ್ಟಾಚಾರದ ಆರೋಪಗಳ ಸತ್ಯಾಸತ್ಯತೆಗಳನ್ನು ತನಿಖೆ, ಸಾಕ್ಷ್ಯ ಹಾಗೂ ಪುರಾವೆಗಳ ಆಧಾರದ ಮೇಲೆ ಸಂವಿಧಾನಬದ್ಧ ಕಾನೂನು ಪ್ರಕ್ರಿಯೆಯ ಮೂಲಕ ನಿರ್ಧರಿಸಬೇಕು. ಅದನ್ನು ಬಿಟ್ಟು ಕಾನೂನನ್ನು ಕೈಗೆತ್ತಿಕೊಂಡು ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ವೇದಿಕೆ ತಿಳಿಸಿದೆ.

ಅಧಿಕಾರಸ್ಥರ ವಿರುದ್ಧದ ಅಕ್ರಮ ಹಾಗೂ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದು ಪತ್ರಕರ್ತರ ಜವಾಬ್ದಾರಿಯಾಗಿದೆ. ತಮ್ಮ ವೃತ್ತಿಪರ ಕರ್ತವ್ಯ ನಿರ್ವಹಿಸಿದ ಕಾರಣಕ್ಕೆ ಪತ್ರಕರ್ತರ ಮೇಲೆ ಹಲ್ಲೆ ನಡೆಯುವುದು ಕೇವಲ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರವಲ್ಲ. ಇದು ಅಧಿಕಾರದ ಪ್ರಭಾವ ಬಳಸಿ ಸಾಮಾನ್ಯ ನಾಗರಿಕರನ್ನು ದಮನಿಸುವ ಪ್ರವೃತ್ತಿಗೆ ಕಾರಣವಾಗಬಹುದು ಎಂದು ವೇದಿಕೆ ಆತಂಕ ವ್ಯಕ್ತಪಡಿಸಿದೆ.

ಶಾಂತಿ ಹಾಗೂ ಸೌಹಾರ್ದಯುತ ಸಮಾಜ ನಿರ್ಮಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಹಬಾಳ್ವೆ ಉಡುಪಿ ಜಿಲ್ಲೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದೆ.

ಯಾವುದೇ ಅಧಿಕಾರದ ಒತ್ತಡಕ್ಕೆ ಮಣಿಯದೆ, ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಆಗ್ರಹಿಸಿದೆ.