ಪಿಕಪ್‌ನಲ್ಲಿ 3 ದನಗಳ ಸಾಗಾಟ : ಓರ್ವ ಅರೆಸ್ಟ್

0
4

ಕಾರ್ಕಳ : ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮೂರು ದನಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ವಾಹನವನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಂಕಲಕರಿಯದಲ್ಲಿ ನಡೆದಿದೆ.

ಎಳಿಂಜೆ ಗ್ರಾಮದ ಜಯಮೂಲ್ಯ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಕೆಎ 19 ಎಎಫ್ 2512 ನೋಂದಣಿ ಸಂಖ್ಯೆಯ ಪಿಕಪ್ ವಾಹನದಲ್ಲಿ ಇಬ್ರಾಹಿಂ ಎಂಬವರು ಕೊಟ್ರಾಪಾಡಿ ಮನೆಯಿಂದ ಖರೀದಿಸಿದ್ದ ದನಗಳನ್ನು ಮುಂಡ್ಕೂರು ಕಡೆಗೆ ಸಾಗಿಸುತ್ತಿದ್ದಾಗ ಸಂಕಲಕರಿಯ ರಾಜ್ಯ ಹೆದ್ದಾರಿಯಲ್ಲಿ ವಾಹನವನ್ನು ತಡೆದು ನಿಲ್ಲಿಸಲಾಗಿದೆ.

ವಾಹನದಲ್ಲಿ ಮೂರು ದನಗಳಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದನಗಳನ್ನು ವಾಹನ ಸಮೇತ ಠಾಣೆಗೆ ಕರೆದೊಯ್ಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.