ಬೆಂಗಳೂರು : ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ದಿನದ 24 ಗಂಟೆಯೂ ನಿರಂತರವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಒಂದು ನಿಮಿಷವೂ ಕ್ಯಾಮೆರಾಗಳು ಆಫ್ ಆಗದಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಖಡಕ್ ಸೂಚನೆ ನೀಡಿದೆ.
ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಮಹತ್ವದ ನಿರ್ದೇಶನ ನೀಡಿದೆ. ಪ್ರಕರಣದ ತನಿಖೆ ಸಂದರ್ಭದಲ್ಲಿ ಕಳೆದ 11 ತಿಂಗಳಿನಿಂದ ಠಾಣೆಯ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಪೊಲೀಸರು ನೀಡಿದ ಉತ್ತರಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಠಾಣೆಯಲ್ಲಿ UPS ಸಮಸ್ಯೆಯಿಂದಾಗಿ ಸಿಸಿಟಿವಿ ಕೆಲಸ ಮಾಡುತ್ತಿಲ್ಲ ಎಂಬ ಪೊಲೀಸರ ಸಮಜಾಯಿಷಿಯನ್ನು ಒಪ್ಪದ ನ್ಯಾಯಾಲಯ, ಇಂತಹ ನಿರ್ಲಕ್ಷ್ಯ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸವನ್ನು ಕುಗ್ಗಿಸುತ್ತದೆ ಎಂದು ಅಭಿಪ್ರಾಯಪಟ್ಟಿತು.
ಸುಪ್ರೀಂ ಕೋರ್ಟ್ ನಿರ್ದೇಶನ ಪಾಲನೆ ಕಡ್ಡಾಯ
ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ಅವುಗಳನ್ನು ಸದಾ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿ ಇಡುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.
ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ನೈಜ ಸಮಯದಲ್ಲಿ (ರಿಯಲ್‌ಟೈಮ್) ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಡಿಜಿ-ಐಜಿಪಿ ಕಚೇರಿಯಿಂದಲೇ ನೇರವಾಗಿ ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ರೂಪಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಸಿಸಿಟಿವಿ ವ್ಯವಸ್ಥೆ ಕೆಟ್ಟುಹೋದ ಸಂದರ್ಭದಲ್ಲಿ ತಕ್ಷಣವೇ ದುರಸ್ತಿ ಮಾಡುವ ವ್ಯವಸ್ಥೆ ಇರಬೇಕು. ತಾಂತ್ರಿಕ ಸಮಸ್ಯೆ ಅಥವಾ ವಿದ್ಯುತ್, UPS ದೋಷದಂತಹ ಕಾರಣಗಳನ್ನು ಮುಂದಿಟ್ಟುಕೊಂಡು ಕ್ಯಾಮೆರಾಗಳು ದೀರ್ಘಕಾಲ ಕಾರ್ಯನಿರ್ವಹಿಸದಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಹೈಕೋರ್ಟ್ ನೀಡಿದೆ.
ವಿಶೇಷವಾಗಿ ಪೊಲೀಸ್ ಠಾಣೆಗಳಲ್ಲಿ ನಡೆಯುವ ವಿಚಾರಣೆ, ದೂರು ಸ್ವೀಕಾರ, ಬಂಧನ ಹಾಗೂ ಇತರ ಪ್ರಮುಖ ಪ್ರಕ್ರಿಯೆಗಳ ಪಾರದರ್ಶಕತೆ ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಗೆ ಸಿಸಿಟಿವಿ ವ್ಯವಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸುವುದು ಅತ್ಯಗತ್ಯ ಎಂದು ನ್ಯಾಯಾಲಯದ ನಿರ್ದೇಶನ ಮಹತ್ವ ಪಡೆದುಕೊಂಡಿದೆ.

