ಬೆಳ್ಳಾರೆ : ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ಳಿಗೆ ಗ್ರಾಮದ ಕುಂಟಿಕಾನ ನಿವಾಸಿ ವಿವಾಹಿತ ಮಹಿಳೆ ಹಾಗೂ ಅವರ ಮೂರು ವರ್ಷದ ಮಗು ಕಾಣೆಯಾಗಿದ್ದ ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.
ಮಹಿಳೆ ರಮ್ಮಾ ಎ.ವಿ. (29) ಹಾಗೂ ಅವರ ಪುತ್ರ ಪ್ರಾಪ್ತಿ (3) ಅವರು ಆಗಸ್ಟ್ 10ರಿಂದ ಕಾಣೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಮಹಿಳೆ ಮತ್ತು ಮಗುವಿನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದು, ಉತ್ತರ ಕರ್ನಾಟಕದ ಹುಬ್ಬಳ್ಳಿ ಪ್ರದೇಶದಲ್ಲಿ ಇಬ್ಬರೂ ಪತ್ತೆಯಾಗಿದ್ದಾರೆ. ಬಳಿಕ ಪೊಲೀಸರು ಮಹಿಳೆ ಹಾಗೂ ಮಗುವನ್ನು ಸುರಕ್ಷಿತವಾಗಿ ಕರೆತಂದು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಕಾಣೆಯಾಗಿದ್ದ ತಾಯಿ ಮತ್ತು ಮಗು ಸುರಕ್ಷಿತವಾಗಿ ಮನೆಗೆ ಮರಳಿರುವುದಕ್ಕೆ ಕುಟುಂಬಸ್ಥರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಅವರ ಮಾರ್ಗದರ್ಶನದಲ್ಲಿ ಎಎಸ್‌ಐ ರವೀಂದ್ರ ಹಾಗೂ ಹೆಡ್ ಕಾನ್‌ಸ್ಟೆಬಲ್ ಉದಯ ಗೌಡ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

