
4×400 ಮೀಟರ್ ರಿಲೇಯಲ್ಲಿ ಬಾಲಕಿಯರಿಗೆ ದ್ವಿತೀಯ ಸ್ಥಾನ; 4×100 ಮೀಟರ್ ರಿಲೇಯಲ್ಲಿ ತೃತೀಯ ಸ್ಥಾನ
ಆಳ್ವಾಸ್ ಪದವಿಪೂರ್ವ ಕಾಲೇಜು, ಮೂಡಬಿದಿರೆಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗದ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
4×100 ಮೀಟರ್ ರಿಲೇ ಓಟದ ಬಾಲಕಿಯರ ವಿಭಾಗದಲ್ಲಿ ಕಾಲೇಜಿನ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ. ತಂಡದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಡಿಂಪಲ್ ಶೆಟ್ಟಿ ಹಾಗೂ ಪ್ರಥಮ ವಿಜ್ಞಾನ ವಿಭಾಗದ ಪ್ರತೀಕ್ಷಾ, ಗುಣಶ್ರೀ ಮತ್ತು ದಿವಿಜ್ಞಾ ಭಾಗವಹಿಸಿದ್ದರು.
4×400 ಮೀಟರ್ ರಿಲೇ ಓಟದ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ತಂಡ ಮತ್ತೊಂದು ಸಾಧನೆ ಮಾಡಿದೆ. ಈ ತಂಡದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಡಿಂಪಲ್ ಶೆಟ್ಟಿ, ಸಾನ್ವಿತಾ ಹಾಗೂ ಪ್ರಥಮ ವಿಜ್ಞಾನ ವಿಭಾಗದ ದಿವಿಜ್ಞಾ ಮತ್ತು ಧನ್ವಿ ಭಾಗವಹಿಸಿದ್ದರು.
ವೈಯಕ್ತಿಕ ವಿಭಾಗದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಮೋಕ್ಷಿತ್ ಅವರು ಹೈಜಂಪ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಪ್ರಥಮ ವಿಜ್ಞಾನ ವಿಭಾಗದ ಧನ್ವಿ ಅವರು 1500 ಮೀಟರ್ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದರು.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ ಮೋಕ್ಷಿತ್ ಅವರಿಗೆ ಶುಭ ಹಾರೈಸಿದ್ದಾರೆ.
