ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕೇರಳ ರಾಜ್ಯ ಘಟಕ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ಗಳ ಸಹಯೋಗದಲ್ಲಿ ಕಾಸರಗೋಡು ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ–2026 ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವ–2026 ಕಾರ್ಯಕ್ರಮವನ್ನು ಆಗಸ್ಟ್ 23ರಂದು ಆಯೋಜಿಸಲಾಗಿದೆ.
ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾಸರಗೋಡು–ಕರ್ನಾಟಕ ಮಕ್ಕಳ ಕವಿಗೋಷ್ಠಿ, ಮಕ್ಕಳ ಸಾಂಸ್ಕೃತಿಕ ಉತ್ಸವ ಹಾಗೂ ಕಾಸರಗೋಡು–ಕರ್ನಾಟಕ ಚುಟುಕು ಕವಿಗೋಷ್ಠಿ ಸೇರಿದಂತೆ ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಅಂದು ಅಪರಾಹ್ನ 2.30ರಿಂದ ಸಂಜೆ 5.30ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮಕ್ಕಳಿಗೆ ಹಾಗೂ ಸಾಹಿತ್ಯಾಸಕ್ತರಿಗೆ ವೇದಿಕೆ ಕಲ್ಪಿಸಲಾಗುತ್ತಿದೆ.
ಕಾರ್ಯಕ್ರಮದ ಅಂಗವಾಗಿ ಕು. ಸಮೃದ್ಧಿ ಆಳ್ವ ಅವರ ‘ಚಿಗುರಿದ ಕನಸು’ ಚುಟುಕು ಸಂಕಲನದ ಬಿಡುಗಡೆ ಸಮಾರಂಭವೂ ನಡೆಯಲಿದೆ. ಯುವ ಬರಹಗಾರರ ಸಾಹಿತ್ಯ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃತಿ ಬಿಡುಗಡೆ ವಿಶೇಷ ಮಹತ್ವ ಪಡೆದುಕೊಂಡಿದೆ.
ಕಾಸರಗೋಡು-ಕರ್ನಾಟಕ ಗಡಿ ಪ್ರದೇಶದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳಲ್ಲಿ ಸಾಹಿತ್ಯಾಭಿರುಚಿ, ಕವಿತೆ ಬರೆಯುವ ಆಸಕ್ತಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಒಲವು ಬೆಳೆಸುವ ಉದ್ದೇಶವೂ ಈ ಸಾಹಿತ್ಯೋತ್ಸವ ಹೊಂದಿದೆ.
ಕಾಸರಗೋಡು ಹಾಗೂ ಕರ್ನಾಟಕದ ವಿವಿಧ ಭಾಗಗಳ ಮಕ್ಕಳು, ಕವಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

