ಮೂಡುಬಿದಿರೆ : ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ (ರಿ.) ಇದರ ಆಶ್ರಯದಲ್ಲಿ 63ನೇ ವರ್ಷದ ಮೂಡುಬಿದಿರೆ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 14ರಿಂದ 18ರವರೆಗೆ ಐದು ದಿನಗಳ ಕಾಲ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ವೈವಿಧ್ಯಮಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಸೆ.14ರಂದು ಸೋಮವಾರದಿಂದ ಸೆ.18ರಂದು ಶುಕ್ರವಾರದವರೆಗೆ ನಡೆಯಲಿರುವ ಗಣೇಶೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉತ್ಸವದ ಐದು ದಿನಗಳಲ್ಲೂ ಅನ್ನಸಂತರ್ಪಣೆ ನಡೆಯಲಿದೆ.
ಉತ್ಸವದ ಪ್ರಮುಖ ಆಕರ್ಷಣೆಯಾದ ಶ್ರೀ ಮಹಾಗಣಪತಿ ದೇವರ ಶೋಭಾಯಾತ್ರೆಯು ಮೂಡುಬಿದಿರೆ ಸಮಾಜ ಮಂದಿರದಿಂದ ಹೊರಟು ಆಲಂಗಾರು ಬಡಗು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ತೆರಳಲಿದೆ. ಅಲ್ಲಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ಬಳಿಕ ಗಣೇಶ ವಿಗ್ರಹವನ್ನು ಮಾನಸ ಗಂಗೋತ್ರಿ ಸರೋವರದಲ್ಲಿ ಜಲಸ್ತಂಭನ ಮಾಡಲಾಗುವುದು.
ಐದು ದಿನಗಳ ಕಾಲ ನಡೆಯುವ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಭ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಉತ್ಸವವನ್ನು ಯಶಸ್ವಿಗೊಳಿಸುವಂತೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಟ್ರಸ್ಟಿಗಳು ಮನವಿ ಮಾಡಿದ್ದಾರೆ.

