ತೆರೆದ ಬಾವಿಗೆ ಬಿದ್ದು ಇಬ್ಬರು ಬಾಲಕಿಯರು ಸಾವು : ರಕ್ಷಿಸಲು ಹೋದ ತಂದೆಯೂ ನಾಪತ್ತೆ

0
16

ಕಾಲು ಜಾರಿ ತೆರೆದ ಬಾವಿಗೆ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟಿರುವ ದಾರುಣ ಘಟನೆ ವಿಜಯಪುರ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆ ಬಳಿ ಶುಕ್ರವಾರ ಸಂಜೆ ನಡೆದಿದೆ. ಮಕ್ಕಳನ್ನು ರಕ್ಷಿಸಲು ಬಾವಿಗೆ ಧುಮುಕಿದ ತಂದೆಯೂ ನಾಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಮೃತ ಬಾಲಕಿಯರನ್ನು ಸಾಕ್ಷಿ (15) ಮತ್ತು ರಕ್ಷಿತಾ (10) ಎಂದು ಗುರುತಿಸಲಾಗಿದೆ. ತೋಟದ ಮನೆಯ ಸಮೀಪದ ತೆರೆದ ಬಾವಿಗೆ ಮಕ್ಕಳು ಆಕಸ್ಮಿಕವಾಗಿ ಬಿದ್ದಿದ್ದಾರೆ ಎನ್ನಲಾಗಿದೆ. ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಅವರ ತಂದೆ ಸಾಬಣ್ಣ (40) ಕೂಡ ಬಾವಿಗೆ ಜಿಗಿದಿದ್ದು, ಬಳಿಕ ಅವರು ನಾಪತ್ತೆಯಾಗಿದ್ದಾರೆ.

ಶುಕ್ರವಾರ ರಾತ್ರಿಯೇ ಇಬ್ಬರು ಬಾಲಕಿಯರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾಬಣ್ಣ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಘಟನೆ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.