ಸಿಹಿ ತಿನ್ನಲು ಹೊರಟವರಿಗೆ ಶಾಕ್; ಸಕ್ಕರೆ ಬೆಲೆಯಲ್ಲಿ ಭಾರಿ ಏರಿಕೆ

0
21

ಬೆಂಗಳೂರು: ಹಬ್ಬಗಳ ಸಾಲು ಆರಂಭವಾಗಿರುವ ಬೆನ್ನಲ್ಲೇ ಸಕ್ಕರೆ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಗ್ರಾಹಕರಿಗೆ ಸಿಹಿ ತಿನಿಸುಗಳ ಜೊತೆಗೆ ಬೆಲೆ ಏರಿಕೆಯ ಕಹಿ ಅನುಭವವಾಗುವಂತಾಗಿದೆ.

ಶ್ರಾವಣ ಮಾಸದೊಂದಿಗೆ ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಸೇರಿದಂತೆ ಹಲವು ಪ್ರಮುಖ ಹಬ್ಬಗಳು ಸಮೀಪಿಸುತ್ತಿದ್ದು, ಸಕ್ಕರೆಗೆ ಬೇಡಿಕೆ ಹೆಚ್ಚಾಗಿದೆ. ಇದರ ಪರಿಣಾಮ ಸಗಟು ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಕೆಯಾಗಿದೆ.

ಐದು ದಿನಗಳ ಹಿಂದೆ ಕೆ.ಜಿ. ಸಕ್ಕರೆಯ ಸಗಟು ಬೆಲೆ ಸುಮಾರು ₹52ರಷ್ಟಿದ್ದರೆ, ಗುರುವಾರದ ವೇಳೆಗೆ ಅದು ₹64ಕ್ಕೆ ಏರಿಕೆಯಾಗಿದೆ. ಕೇವಲ ಕೆಲವೇ ದಿನಗಳಲ್ಲಿ ಕೆ.ಜಿ.ಗೆ ಸುಮಾರು ₹12ರಷ್ಟು ಬೆಲೆ ಹೆಚ್ಚಳವಾಗಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.

ಈ ಹಿಂದೆ ಕಡಿಮೆ ದರದಲ್ಲಿ ಸಕ್ಕರೆ ಖರೀದಿಸಿದ್ದ ವ್ಯಾಪಾರಿಗಳು ಹಳೆಯ ದರದಲ್ಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೆ ಹಳೆಯ ದರದ ದಾಸ್ತಾನು ಖಾಲಿಯಾದ ಬಳಿಕ, ಹೊಸ ಸಗಟು ದರದಲ್ಲಿ ಖರೀದಿಸಿದ ಸಕ್ಕರೆ ಮಾರುಕಟ್ಟೆಗೆ ಬಂದಾಗ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಇನ್ನಷ್ಟು ತಟ್ಟುವ ಸಾಧ್ಯತೆಯಿದೆ.

ಸಾಮಾನ್ಯವಾಗಿ ಸಗಟು ದರಕ್ಕಿಂತ ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆ ಸುಮಾರು 10ರಷ್ಟು ಹೆಚ್ಚಿರುತ್ತದೆ. ಹೀಗಾಗಿ ಸಗಟು ಮಾರುಕಟ್ಟೆಯಲ್ಲಿ ₹64ಕ್ಕೆ ಖರೀದಿಸುವ ಸಕ್ಕರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಸುಮಾರು ₹70ರ ಆಸುಪಾಸಿಗೆ ಮಾರಾಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹಬ್ಬದ ಸಂದರ್ಭದಲ್ಲಿ ಸಿಹಿತಿಂಡಿಗಳು ಹಾಗೂ ವಿವಿಧ ಖಾದ್ಯಗಳ ತಯಾರಿಕೆಗೆ ಸಕ್ಕರೆಯ ಬಳಕೆ ಹೆಚ್ಚಾಗುವುದರಿಂದ, ಬೆಲೆ ಏರಿಕೆಯ ಪರಿಣಾಮ ಗ್ರಾಹಕರ ಜೊತೆಗೆ ಸಿಹಿತಿಂಡಿ ತಯಾರಕರು ಮತ್ತು ವ್ಯಾಪಾರಿಗಳ ಮೇಲೂ ಬೀರುವ ಸಾಧ್ಯತೆಯಿದೆ.