ಮೂಡುಬಿದಿರೆ: ಉಡುಪಿಯ ಅಲೆವೂರಿನಲ್ಲಿ ರಾಸಾಯನಿಕ ಬಳಸಿ ಬಾಳೆಕಾಯಿ ಹಣ್ಣಾಗಿಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆದ ಬೆನ್ನಲ್ಲೇ ಮೂಡುಬಿದಿರೆ ವಾರದ ಸಂತೆಯಲ್ಲೂ ಬಾಳೆಹಣ್ಣು ವ್ಯಾಪಾರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.
ಶುಕ್ರವಾರ ನಡೆದ ವಾರದ ಸಂತೆಯಲ್ಲಿ ಸಾಮಾನ್ಯವಾಗಿ ಬಾಳೆಹಣ್ಣು ಮಾರಾಟ ನಡೆಯುತ್ತಿದ್ದ ಅಂಗಡಿಗಳು ಖಾಲಿಯಾಗಿದ್ದವು. ಸಂತೆ ದಿನಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರಮುಖ ಬಾಳೆಹಣ್ಣು ವ್ಯಾಪಾರಿಗಳೂ ಈ ಬಾರಿ ಗೈರಾಗಿದ್ದರು. ಕೆಲ ಸಣ್ಣ ವ್ಯಾಪಾರಿಗಳು ಮಾತ್ರ ಬಾಳೆಹಣ್ಣು ಮಾರಾಟ ನಡೆಸಿದರು.
ವಿವಿಧೆಡೆ ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಗಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಪ್ರಮುಖ ವ್ಯಾಪಾರಿಗಳು ಈ ಬಾರಿ ಸಂತೆ ಕಡೆಗೆ ಬಾರದಿರುವುದು ಗಮನ ಸೆಳೆದಿದೆ.
ಉಡುಪಿಯ ಅಲೆವೂರಿನಲ್ಲಿ ನಡೆದ ದಾಳಿಯ ಬೆನ್ನಲ್ಲೇ ಮೂಡುಬಿದಿರೆ ಸಂತೆಯಲ್ಲಿ ಬಾಳೆಹಣ್ಣು ವ್ಯಾಪಾರದಲ್ಲಿ ಕಂಡುಬಂದ ಈ ಬದಲಾವಣೆ, ದಾಳಿಯ ಪರಿಣಾಮ ಸ್ಥಳೀಯ ವ್ಯಾಪಾರದ ಮೇಲೂ ಬೀರಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

