ಉಡುಪಿ : ಕೃಷ್ಣ ಸನ್ನಿಧಿಯಲ್ಲಿ ಅಪೂರ್ವ ಸಂಗೀತ ಸಾಧನೆ ಪ್ರಾರಂಭಗೊಂಡಿದೆ. ಸಂಗೀತ ವಿದುಷಿ ಸಂಗೀತಾ ಬಾಲಚಂದ್ರ ಅವರು ಸತತ 25 ಗಂಟೆಗಳ ಕಾಲ ನಿರಂತರವಾಗಿ ಹರಿದಾಸರ ಪದಗಳನ್ನು ಹಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸುವ ಮಹತ್ವದ ಸಂಕಲ್ಪದೊಂದಿಗೆ ಸಂಗೀತ ಸೇವೆ ಆರಂಭಿಸಿದ್ದಾರೆ.
ಗೀತಾ ಮಂದಿರದ ನೃಸಿಂಹ ಸಭಾಭವನದಲ್ಲಿ ಭಾನುವಾರ ಮುಂಜಾನೆ ಶಾಸಕ ಯಶ್ಪಾಲ್ ಸುವರ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಸ್ತುತ ಮುಂಬೈಯಲ್ಲಿ ಚಾತುಮಾರ್ಸ್ಯ ವ್ರತದಲ್ಲಿರುವ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಾದ ಪೂರ್ವಕ ವಿಶೇಷ ವಿಡಿಯೋ ಸಂದೇಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ ಏಷ್ಯಾ ಹೆಡ್ ಡಾ. ಮನೀಷ್ ಬಿಶ್ನೋಯಿ, ಗೋವಾ ರಾಜ್ಯದ ಜಿಎಸ್ಟಿ ಕಮಿಷನರ್ ವಿಠೋಬ ಶೆಟ್ಟಿ , ಭೀಮಾ ಜುವೆಲ್ಲರ್ಸ್ ಪ್ರಬಂಧಕ ರಾಘವೇಂದ್ರ ಭಟ್ ಮುಖ್ಯ ಅತಿಥಿಯಾಗಿದ್ದರು. ಪುತ್ತಿಗೆ ಮಠದ ದಿವಾನ್ ನಾಗರಾಜ ಆಚಾರ್ಯ, ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಶ್ರೀಮಠದ ಕಲಾ ಕಾರ್ಯದರ್ಶಿ ಕೆ. ವಿ. ರಮಣ್ ಪ್ರಸ್ತಾವನೆಗೈದರು.
ಪಕ್ಕ ವಾದ್ಯ ಕಲಾವಿದರು ಕೀಬೋರ್ಡ್ನಲ್ಲಿ ಗುರುರಾಜ್, ಮೊಗಿ ಗುರುರಾಜ್ ಹಾಗೂ ರಜ್ಯಾ ಕರಿವೆಲ್ಲೂರ್; ರಿದಮ್ ಪ್ಯಾಡ್ನಲ್ಲಿ ಪ್ರಭಾಕರ ಅಮ್ಮಿಂಗೋಡ್ ಹಾಗೂ ವಾಮನ ಕೆ., ತಬಲಾದಲ್ಲಿ ದೀಕ್ಷಿತ್ ಕೊಡಂಚಾ ಹಾಗೂ ದೀಪಕ್ ರಾಜ್ ಉಲ್ಲಾಸ್, ಕೊಳಲು ವಾದನದಲ್ಲಿ ಸಂತೋಷ್ ವಿಟ್ಟಲ್ ಸಹಕಾರ ನೀಡುತ್ತಿದ್ದಾರೆ.

