ಕೃಷ್ಣ ಸನ್ನಿಧಿಯಲ್ಲಿ 25 ಗಂಟೆ ನಿರಂತರ ದಾಸವಾಣಿ ಗಾಯನ

0
38

ಉಡುಪಿ : ಕೃಷ್ಣ ಸನ್ನಿಧಿಯಲ್ಲಿ ಅಪೂರ್ವ ಸಂಗೀತ ಸಾಧನೆ ಪ್ರಾರಂಭಗೊಂಡಿದೆ. ಸಂಗೀತ ವಿದುಷಿ ಸಂಗೀತಾ ಬಾಲಚಂದ್ರ ಅವರು ಸತತ 25 ಗಂಟೆಗಳ ಕಾಲ ನಿರಂತರವಾಗಿ ಹರಿದಾಸರ ಪದಗಳನ್ನು ಹಾಡುವ ಮೂಲಕ ಗೋಲ್ಡನ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸುವ ಮಹತ್ವದ ಸಂಕಲ್ಪದೊಂದಿಗೆ ಸಂಗೀತ ಸೇವೆ ಆರಂಭಿಸಿದ್ದಾರೆ.

ಗೀತಾ ಮಂದಿರದ ನೃಸಿಂಹ ಸಭಾಭವನದಲ್ಲಿ ಭಾನುವಾರ ಮುಂಜಾನೆ ಶಾಸಕ ಯಶ್​ಪಾಲ್​ ಸುವರ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಸ್ತುತ ಮುಂಬೈಯಲ್ಲಿ ಚಾತುಮಾರ್ಸ್ಯ ವ್ರತದಲ್ಲಿರುವ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಾದ ಪೂರ್ವಕ ವಿಶೇಷ ವಿಡಿಯೋ ಸಂದೇಶವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಗೋಲ್ಡನ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್ಸ್​ನ ಏಷ್ಯಾ ಹೆಡ್​ ಡಾ. ಮನೀಷ್​ ಬಿಶ್ನೋಯಿ, ಗೋವಾ ರಾಜ್ಯದ ಜಿಎಸ್​ಟಿ ಕಮಿಷನರ್​ ವಿಠೋಬ ಶೆಟ್ಟಿ , ಭೀಮಾ ಜುವೆಲ್ಲರ್ಸ್​ ಪ್ರಬಂಧಕ ರಾಘವೇಂದ್ರ ಭಟ್​ ಮುಖ್ಯ ಅತಿಥಿಯಾಗಿದ್ದರು. ಪುತ್ತಿಗೆ ಮಠದ ದಿವಾನ್​ ನಾಗರಾಜ ಆಚಾರ್ಯ, ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಶ್ರೀಮಠದ ಕಲಾ ಕಾರ್ಯದರ್ಶಿ ಕೆ. ವಿ. ರಮಣ್​ ಪ್ರಸ್ತಾವನೆಗೈದರು.

ಪಕ್ಕ ವಾದ್ಯ ಕಲಾವಿದರು ಕೀಬೋರ್ಡ್​ನಲ್ಲಿ ಗುರುರಾಜ್​, ಮೊಗಿ ಗುರುರಾಜ್​ ಹಾಗೂ ರಜ್ಯಾ ಕರಿವೆಲ್ಲೂರ್​; ರಿದಮ್​ ಪ್ಯಾಡ್​ನಲ್ಲಿ ಪ್ರಭಾಕರ ಅಮ್ಮಿಂಗೋಡ್​ ಹಾಗೂ ವಾಮನ ಕೆ., ತಬಲಾದಲ್ಲಿ ದೀಕ್ಷಿತ್​ ಕೊಡಂಚಾ ಹಾಗೂ ದೀಪಕ್​ ರಾಜ್​ ಉಲ್ಲಾಸ್​, ಕೊಳಲು ವಾದನದಲ್ಲಿ ಸಂತೋಷ್​ ವಿಟ್ಟಲ್​ ಸಹಕಾರ ನೀಡುತ್ತಿದ್ದಾರೆ.