ಬೆಳ್ತಂಗಡಿ : ವ್ಯಕ್ತಿಯೊಬ್ಬರಿಗೆ ವಾಹನದಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಶರತ್ (33) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳ್ತಂಗಡಿ ತಾಲೂಕಿನ ಕಲ್ಮಂಜ ನಿವಾಸಿ ಬಾಲಕೃಷ್ಣ (43) ಅವರು ನೀಡಿದ ದೂರಿನ ಆಧಾರದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಪ್ರಕಾರ, ಧರ್ಮಸ್ಥಳ ನಿವಾಸಿ ಶರತ್ ಕೆಲವು ತಿಂಗಳ ಹಿಂದೆ ಬಾಲಕೃಷ್ಣ ಅವರಿಗೆ ವಾಹನದಿಂದ ಡಿಕ್ಕಿ ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಜುಲೈ 30ರಂದು ಸಂಜೆ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಬಾಲಕೃಷ್ಣ ಅವರನ್ನು ಶರತ್ ಟಾಟಾ ಸುಮೊ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾನೆ. ಧರ್ಮಸ್ಥಳ ಗ್ರಾಮದ ಕುರುಮಾನಿ ಕ್ರಾಸ್ ಬಳಿ ತಲುಪುತ್ತಿದ್ದಂತೆ ಬಾಲಕೃಷ್ಣ ಅವರ ದ್ವಿಚಕ್ರ ವಾಹನಕ್ಕೆ ಟಾಟಾ ಸುಮೊದಿಂದ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಬಾಲಕೃಷ್ಣ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಳರೋಗಿಯಾಗಿ ಚಿಕಿತ್ಸೆ ಪಡೆದ ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 52/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 109ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಆಗಸ್ಟ್ 22ರಂದು ಆರೋಪಿ ಶರತ್‌ನನ್ನು ಬಂಧಿಸಿದ್ದಾರೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

