ಹಾಳಾದ ಆಹಾರ, ಕೊಳಕು ಅಡುಗೆಮನೆಗೆ ಬ್ರೇಕ್ : ಹೋಟೆಲ್‌ಗಳಿಗೆ ಬಿಗಿ ನಿಯಮ

0
45

ರಾಜ್ಯಾದ್ಯಂತ ಆಹಾರ ಸುರಕ್ಷತೆ ಕುರಿತು ನಡೆಸಿದ ವಿಶೇಷ ತಪಾಸಣಾ ಅಭಿಯಾನದ ವೇಳೆ ಹಲವು ಹೋಟೆಲ್‌ಗಳು ಹಾಗೂ ಆಹಾರ ಉದ್ದಿಮೆಗಳಲ್ಲಿ ಸ್ವಚ್ಛತೆ, ಆಹಾರ ಸುರಕ್ಷತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಹಲವು ಲೋಪದೋಷಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತಾಲಯವು ರಾಜ್ಯದ ಎಲ್ಲಾ ಆಹಾರ ಉದ್ದಿಮೆದಾರರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಹಾಗೂ ಸಲಹಾ ಪ್ರಕಟಣೆ ಹೊರಡಿಸಿದೆ.

ತಪಾಸಣೆಯ ವೇಳೆ ಪತ್ತೆಯಾದ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಉದ್ದಿಮೆದಾರರಿಗೆ ನಿಗದಿತ ಕಾಲಾವಕಾಶ ನೀಡಲಾಗಿದ್ದು, ಈ ಅವಧಿಯೊಳಗೆ ಅಗತ್ಯ ಕ್ರಮ ಕೈಗೊಂಡು ಆಹಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ನಿಗದಿತ ಅವಧಿ ಬಳಿಕ ನಡೆಯುವ ಮರುತಪಾಸಣೆಯಲ್ಲಿಯೂ ನಿಯಮ ಉಲ್ಲಂಘನೆ ಮುಂದುವರಿದಿರುವುದು ಕಂಡುಬಂದರೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತಾಲಯ ಎಚ್ಚರಿಕೆ ನೀಡಿದೆ.

ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಪಾಲಿಸಬೇಕಾದ ಪ್ರಮುಖ ನಿಯಮಗಳು

FSSAI ಪರವಾನಗಿ ಕಡ್ಡಾಯ:
ಎಲ್ಲಾ ಆಹಾರ ಉದ್ದಿಮೆದಾರರು ಅನ್ವಯವಾಗುವ ಮಾನ್ಯ FSSAI ಪರವಾನಗಿ ಅಥವಾ ನೋಂದಣಿ ಹೊಂದಿರಬೇಕು. ಪರವಾನಗಿಗೆ ಸಂಬಂಧಿಸಿದ ಷರತ್ತುಗಳು ಹಾಗೂ ಆಹಾರ ಸುರಕ್ಷತಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಆಹಾರದ ಗುಣಮಟ್ಟಕ್ಕೆ ಆದ್ಯತೆ:
ಸುರಕ್ಷಿತ, ಗುಣಮಟ್ಟದ ಹಾಗೂ ಮಾನವ ಸೇವನೆಗೆ ಯೋಗ್ಯವಾದ ಆಹಾರವನ್ನಷ್ಟೇ ತಯಾರಿಸಿ, ಸಂಗ್ರಹಿಸಿ ಮತ್ತು ಮಾರಾಟ ಮಾಡಬೇಕು. ಅವಧಿ ಮೀರಿದ, ಹಾಳಾದ, ಕೊಳೆತ, ಕಲುಷಿತ ಅಥವಾ ಅನುಮಾನಾಸ್ಪದ ಆಹಾರ ಪದಾರ್ಥಗಳನ್ನು ಬಳಸಬಾರದು.

ಕಚ್ಚಾ ವಸ್ತುಗಳ ಖರೀದಿ ಮತ್ತು ಸಂಗ್ರಹಣೆ:
ವಿಶ್ವಾಸಾರ್ಹ ಮೂಲಗಳಿಂದ ಕಚ್ಚಾ ವಸ್ತುಗಳನ್ನು ಖರೀದಿಸಿ, ಸೂಕ್ತ ತಾಪಮಾನದಲ್ಲಿ ಸ್ವಚ್ಛ ಹಾಗೂ ಆಹಾರ-ಸುರಕ್ಷಿತ ಕಂಟೈನರ್‌ಗಳಲ್ಲಿ ಸಂಗ್ರಹಿಸಬೇಕು. ಬ್ಯಾಚ್ ಸಂಖ್ಯೆ, ತಯಾರಿಕಾ ದಿನಾಂಕ ಹಾಗೂ ಅವಧಿ ಮುಕ್ತಾಯ ದಿನಾಂಕ ಪರಿಶೀಲಿಸಬೇಕು.

ಅವಧಿ ಮೀರಿದ ಆಹಾರ ವಿಲೇವಾರಿ:
ಅವಧಿ ಮೀರಿದ ಅಥವಾ ಬಳಕೆಗೆ ಯೋಗ್ಯವಲ್ಲದ ಆಹಾರವನ್ನು ತಕ್ಷಣ ಪ್ರತ್ಯೇಕಿಸಿ, ಆಹಾರ ತಯಾರಿಕೆ ಅಥವಾ ಮಾರಾಟದಲ್ಲಿ ಬಳಕೆಯಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.

ಅಡುಗೆಮನೆಯ ಸ್ವಚ್ಛತೆ:
ಅಡುಗೆಮನೆ, ಆಹಾರ ತಯಾರಿಕಾ ಸ್ಥಳ, ಸಂಗ್ರಹಣಾ ಪ್ರದೇಶ, ನೆಲ, ಗೋಡೆ, ಕಿಟಕಿ ಹಾಗೂ ಮೇಲ್ಛಾವಣಿಯನ್ನು ಸ್ವಚ್ಛ ಮತ್ತು ಶುಷ್ಕವಾಗಿಡಬೇಕು. ಹಾನಿಗೊಳಗಾದ ಮೂಲಸೌಕರ್ಯಗಳನ್ನು ತಕ್ಷಣ ದುರಸ್ತಿ ಮಾಡಬೇಕು.

ಪಾತ್ರೆ ಹಾಗೂ ಉಪಕರಣಗಳ ಸ್ವಚ್ಛತೆ:
ಆಹಾರದೊಂದಿಗೆ ಸಂಪರ್ಕಕ್ಕೆ ಬರುವ ಪಾತ್ರೆಗಳು, ಕತ್ತರಿಸುವ ಬೋರ್ಡ್, ಚಾಕು, ಕೌಂಟರ್‌ಗಳು ಸೇರಿದಂತೆ ಎಲ್ಲ ಉಪಕರಣಗಳನ್ನು ಸೂಕ್ತವಾಗಿ ಸ್ವಚ್ಛಗೊಳಿಸಿ, ಅಗತ್ಯವಿದ್ದಲ್ಲಿ ಸ್ಯಾನಿಟೈಸ್ ಮಾಡಬೇಕು.

ಕೀಟ ನಿಯಂತ್ರಣ:
ಅಡುಗೆಮನೆ ಹಾಗೂ ಆಹಾರ ಸಂಗ್ರಹಣಾ ಪ್ರದೇಶಗಳಿಗೆ ಇಲಿ, ಜಿರಳೆ ಹಾಗೂ ಇತರ ಕೀಟಗಳು ಪ್ರವೇಶಿಸದಂತೆ ಪರಿಣಾಮಕಾರಿ Pest Control ಕ್ರಮಗಳನ್ನು ಕೈಗೊಳ್ಳಬೇಕು.

ತಾಪಮಾನ ನಿಯಂತ್ರಣ:
ಹಾಲು, ಮಾಂಸ, ಮೊಟ್ಟೆ, ಸಿದ್ಧ ಆಹಾರ ಸೇರಿದಂತೆ ಶೀಘ್ರ ಹಾಳಾಗುವ ಆಹಾರ ಪದಾರ್ಥಗಳನ್ನು ನಿಗದಿತ ತಾಪಮಾನದಲ್ಲಿ ಸಂಗ್ರಹಿಸಬೇಕು. ಫ್ರಿಜ್, ಡೀಪ್ ಫ್ರೀಜರ್ ಹಾಗೂ ಕೂಲರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ:
ಆಹಾರ ನಿರ್ವಹಿಸುವ ಸಿಬ್ಬಂದಿ ಸ್ವಚ್ಛ ಉಡುಪು, ಹೆಡ್ ಕ್ಯಾಪ್ ಅಥವಾ ಹೆಡ್ ಕವರ್, ಏಪ್ರನ್ ಹಾಗೂ ಅಗತ್ಯ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಬಳಸಬೇಕು. ಆಹಾರ ನಿರ್ವಹಿಸುವ ಮುನ್ನ ಕೈಗಳನ್ನು ಸರಿಯಾಗಿ ತೊಳೆಯಬೇಕು.

ಸುರಕ್ಷಿತ ನೀರು ಮತ್ತು ಐಸ್:
ಆಹಾರ ತಯಾರಿಕೆ, ಸಂಸ್ಕರಣೆ ಹಾಗೂ ಕುಡಿಯಲು ಬಳಸುವ ನೀರು ಸುರಕ್ಷಿತವಾಗಿರಬೇಕು. ಆಹಾರ ಮತ್ತು ಪಾನೀಯಗಳಲ್ಲಿ ಬಳಸುವ ಐಸ್ ಕೂಡ ಗುಣಮಟ್ಟದ ಸುರಕ್ಷಿತ ನೀರಿನಿಂದ ತಯಾರಾಗಿರಬೇಕು.

ಲೇಬಲಿಂಗ್ ಮತ್ತು ಆಹಾರ ಪ್ರದರ್ಶನ:
ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳಲ್ಲಿ ಅನ್ವಯವಾಗುವ FSSAI ನಿಯಮಗಳಂತೆ ಕಡ್ಡಾಯ ಲೇಬಲಿಂಗ್ ವಿವರಗಳನ್ನು ನಮೂದಿಸಬೇಕು. ಗ್ರಾಹಕರನ್ನು ತಪ್ಪುದಾರಿಗೆಳೆಯುವ ಯಾವುದೇ ಮಾಹಿತಿ ಅಥವಾ ಪ್ರದರ್ಶನ ನೀಡಬಾರದು.

ಆಹಾರ ತ್ಯಾಜ್ಯ ನಿರ್ವಹಣೆ:
ಆಹಾರ ತ್ಯಾಜ್ಯವನ್ನು ಮುಚ್ಚಳ ಹೊಂದಿರುವ ಕಸದ ಬುಟ್ಟಿಗಳಲ್ಲಿ ಸಂಗ್ರಹಿಸಿ, ನಿಯಮಾನುಸಾರ ವಿಲೇವಾರಿ ಮಾಡಬೇಕು. ಆಹಾರ ತಯಾರಿಕಾ ಅಥವಾ ಸಂಗ್ರಹಣಾ ಪ್ರದೇಶದಲ್ಲಿ ತ್ಯಾಜ್ಯ ಸಂಗ್ರಹವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಒದಗಿಸುವುದು ಪ್ರತಿಯೊಬ್ಬ ಆಹಾರ ಉದ್ದಿಮೆದಾರರ ಜವಾಬ್ದಾರಿಯಾಗಿದ್ದು, ನಿಯಮಗಳನ್ನು ಉಲ್ಲಂಘಿಸುವ ಉದ್ದಿಮೆದಾರರ ವಿರುದ್ಧ ಮುಂದಿನ ಹಂತದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಆಯುಕ್ತಾಲಯ ನೀಡಿದೆ.