ಗುರು ಪೂರ್ಣಿಮೆಯಂದು 368 ಧ್ಯಾನ ಶಿಕ್ಷಕರಿಗೆ ಪ್ರಮಾಣಪತ್ರ ಪ್ರದಾನ : ಧ್ಯಾನ ಮಾರ್ಗದರ್ಶಿ ಕೃತಿಯ ಕನ್ನಡ ಆವೃತ್ತಿ ಬಿಡುಗಡೆ

0
10

ಕರ್ನಾಟಕದ ಎಲ್ಲ 31 ಜಿಲ್ಲೆಗಳ ಅಭ್ಯರ್ಥಿಗಳ ಭಾಗವಹಿಸುವಿಕೆ : ಬೆಂಗಳೂರಿನ ಸಮಾರಂಭದಲ್ಲಿ 1,500ಕ್ಕೂ ಹೆಚ್ಚು ಜನರು ಭಾಗಿ

ಬೆಂಗಳೂರು : ಗುರು ಪೂರ್ಣಿಮೆಯ ಅಂಗವಾಗಿ ಬೆಂಗಳೂರಿನ ವಜ್ರಹಳ್ಳಿಯ ಅರೋಹ ಸ್ಪೇಸ್ ಅಕಾಡೆಮಿಯಲ್ಲಿ ಜುಲೈ 29ರಂದು ಆಯೋಜಿಸಿದ್ದ ಸಮಾರಂಭದಲ್ಲಿ 368 ಧ್ಯಾನ ಶಿಕ್ಷಕರಿಗೆ ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅಕಾಡೆಮಿಯ ಸಂಸ್ಥಾಪಕ ಡಾ. ಅಯ್ಯಪ್ಪ ಪಿಂಡಿ ಅವರ “Meditation — The Complete Guide to the Inward Journey” ಕೃತಿಯ ಕನ್ನಡ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.

ಸಂಪೂರ್ಣ ಉಚಿತವಾಗಿ ಆಯೋಜಿಸಲಾದ “Mission 1,000 Teachers” ಧ್ಯಾನ ಶಿಕ್ಷಕರ ತರಬೇತಿ ಕಾರ್ಯಕ್ರಮದ ಮೊದಲ ಬ್ಯಾಚ್ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಡೆದ ಸಮಾರಂಭದಲ್ಲಿ 1,500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಕಾರ್ಯಕ್ರಮವು ಮೂರು ಗಂಟೆಗಳ ಸಾಮೂಹಿಕ ನಾದ ಧ್ಯಾನ—ಸಂಗೀತ ಧ್ಯಾನದೊಂದಿಗೆ ಆರಂಭವಾಯಿತು.

ಡಾ. ಅಯ್ಯಪ್ಪ ಪಿಂಡಿ ಅವರ ಧ್ಯಾನ ಮಾರ್ಗದರ್ಶಿ ಕೃತಿಯ ಕನ್ನಡ ಆವೃತ್ತಿಯು ಉಸಿರಿನ ಧ್ಯಾನದ ವಿಧಾನವನ್ನು ಸಮಗ್ರವಾಗಿ ವಿವರಿಸುವ 22 ಅಧ್ಯಾಯಗಳನ್ನು ಒಳಗೊಂಡಿದೆ. ಇದರ ಇಂಗ್ಲಿಷ್ ಆವೃತ್ತಿ 2026ರ ಮೇ ತಿಂಗಳಲ್ಲಿ ಪ್ರಕಟವಾಗಿತ್ತು. ಧ್ಯಾನದ ತಾತ್ವಿಕ ಹಿನ್ನೆಲೆ, ಉಸಿರಿನ ಮೇಲೆ ಗಮನ ಕೇಂದ್ರೀಕರಿಸುವ ವಿಧಾನ, ದೈನಂದಿನ ಬದುಕಿನಲ್ಲಿ ಧ್ಯಾನವನ್ನು ಅಳವಡಿಸಿಕೊಳ್ಳುವ ಕ್ರಮ ಹಾಗೂ ಅಂತರ್ಮುಖ ಪ್ರಯಾಣದ ಹಂತಗಳನ್ನು ಸರಳ ಭಾಷೆಯಲ್ಲಿ ಕೃತಿಯಲ್ಲಿ ವಿವರಿಸಲಾಗಿದೆ.

ಮೊದಲ ಬ್ಯಾಚ್‌ನ ತರಬೇತಿಯು 2026ರ ಏಪ್ರಿಲ್‌ನಿಂದ ಜುಲೈವರೆಗೆ ನಾಲ್ಕು ತಿಂಗಳು ನಡೆಯಿತು. ವಾರದಲ್ಲಿ ಮೂರು ದಿನ ಆನ್‌ಲೈನ್ ಮೂಲಕ ಒಟ್ಟು 36 ತರಗತಿಗಳು ಹಾಗೂ ಸುಮಾರು 70 ಗಂಟೆಗಳ ತರಬೇತಿ ನೀಡಲಾಯಿತು. ಕರ್ನಾಟಕದ ಎಲ್ಲ 31 ಜಿಲ್ಲೆಗಳು ಮತ್ತು ವಿದೇಶಗಳಿಂದ 1,400ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದರು. ಅಕಾಡೆಮಿಯ ಯೂಟ್ಯೂಬ್ ಚಾನೆಲ್‌ನಲ್ಲಿರುವ ತರಬೇತಿ ವಿಡಿಯೊಗಳು 1.70 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿವೆ.

ನೋಂದಣಿ ಮಾಡಿಕೊಂಡ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗಿಲ್ಲ. ಅಭ್ಯರ್ಥಿಗಳು ದೈನಂದಿನ ಧ್ಯಾನಾಭ್ಯಾಸದ ದಾಖಲೆ, ಪ್ರತಿ ತರಗತಿಯ ನಂತರದ ಲಿಖಿತ ಅಸೈನ್‌ಮೆಂಟ್‌ಗಳು, ಸ್ವತಃ ನಡೆಸಿದ ಧ್ಯಾನ ತರಗತಿಗಳ ವಿಡಿಯೊಗಳು ಹಾಗೂ ಬೋಧನಾ ಸಾಮರ್ಥ್ಯದ ಮೌಲ್ಯಮಾಪನವನ್ನು ಪೂರ್ಣಗೊಳಿಸಬೇಕಾಗಿತ್ತು. ಅಂತಿಮವಾಗಿ ಮೂರು ಗಂಟೆಗಳ ಅವಧಿಯ 180 ಪ್ರಶ್ನೆಗಳ ಅರ್ಹತಾ ಪರೀಕ್ಷೆ ನಡೆಸಲಾಗಿದ್ದು, ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 368 ಮಂದಿ ಮಾತ್ರ ಪ್ರಮಾಣೀಕೃತ ಧ್ಯಾನ ಶಿಕ್ಷಕರಾಗಿದ್ದಾರೆ.

ತರಬೇತಿಯಲ್ಲಿ ಮುಖ್ಯವಾಗಿ ಆನಾಪಾನಸತಿ ಧ್ಯಾನ ವಿಧಾನ, ಅಂದರೆ ಸಹಜವಾಗಿ ಒಳಗೆ ಬರುವ ಮತ್ತು ಹೊರಗೆ ಹೋಗುವ ಉಸಿರನ್ನು ಯಾವುದೇ ಬದಲಾವಣೆ ಮಾಡದೆ ಗಮನಿಸುವ ಅಭ್ಯಾಸವನ್ನು ಕಲಿಸಲಾಯಿತು. ಈ ವಿಧಾನವನ್ನು ಬ್ರಹ್ಮರ್ಷಿ ಪತ್ರೀಜಿ ಮತ್ತು ಪಿರಮಿಡ್ ಸ್ಪಿರಿಚುವಲ್ ಸೊಸೈಟೀಸ್ ಮೂವ್‌ಮೆಂಟ್ ಪರಂಪರೆಯಲ್ಲಿ ಬೋಧಿಸಲಾಗುತ್ತಿದೆ. ಕಾರ್ಯಕ್ರಮವು IMMA ಮತ್ತು IPHM ಸಂಸ್ಥೆಗಳ ಮಾನ್ಯತೆ ಹೊಂದಿದೆ.

ಈ ಕುರಿತು ಮಾತನಾಡಿದ ಡಾ. ಅಯ್ಯಪ್ಪ ಪಿಂಡಿ, “ಈ ತರಬೇತಿಗೆ ನಾವು ಯಾವುದೇ ಶುಲ್ಕ ಪಡೆದಿಲ್ಲ ಮತ್ತು ಮುಂದೆಯೂ ಶುಲ್ಕ ವಿಧಿಸುವುದಿಲ್ಲ. ಪ್ರಮಾಣಪತ್ರ ಅಂತಿಮ ಗುರಿಯಲ್ಲ; ಅದು ಸೇವಾ ಪ್ರಯಾಣದ ಆರಂಭ. ಪ್ರಮಾಣೀಕೃತ ಶಿಕ್ಷಕರು ಧ್ಯಾನ ಕೇಂದ್ರಗಳಿಗೆ ಬರಲಾಗದ ಸಾವಿರಾರು ಜನರಿಗೆ ಉಸಿರಿನ ಧ್ಯಾನವನ್ನು ತಲುಪಿಸಲಿದ್ದಾರೆ” ಎಂದು ಹೇಳಿದರು.

“Mission 1,000 Teachers” ಎರಡನೇ ಬ್ಯಾಚ್‌ನ ನೋಂದಣಿ ಆರಂಭವಾಗಿದ್ದು, ತರಬೇತಿಯು ಸೆಪ್ಟೆಂಬರ್ 5, 2026ರ ಶಿಕ್ಷಕರ ದಿನದಂದು ಆರಂಭವಾಗಲಿದೆ. ತರಬೇತಿ ಪೂರ್ಣಗೊಳಿಸುವವರಿಗೆ ಡಿಸೆಂಬರ್ 21, 2026ರ ವಿಶ್ವ ಧ್ಯಾನ ದಿನದಂದು ಪ್ರಮಾಣಪತ್ರ ನೀಡಲು ಉದ್ದೇಶಿಸಲಾಗಿದೆ. ಮೊದಲ ಬ್ಯಾಚ್‌ನ ಶಿಕ್ಷಕರು ಹೊಸ ಅಭ್ಯರ್ಥಿಗಳಿಗೆ ಮಾರ್ಗದರ್ಶಕರು ಮತ್ತು ಮೆಂಟರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಅಂತಾರಾಷ್ಟ್ರೀಯ ಧ್ಯಾನ ತರಬೇತುದಾರ ಡಾ. ಅಯ್ಯಪ್ಪ ಪಿಂಡಿ ಅವರು ಸ್ಥಾಪಿಸಿರುವ ಅರೋಹ ಸ್ಪೇಸ್ ಅಕಾಡೆಮಿಯು ಧ್ಯಾನ ತರಬೇತಿ, ಸೌಂಡ್ ಹೀಲಿಂಗ್, ಕಾರ್ಯಾಗಾರ, ಶಿಬಿರ ಮತ್ತು ರಿಟ್ರೀಟ್‌ಗಳನ್ನು ಆಯೋಜಿಸುತ್ತಿದೆ. ಆನಾಪಾನಸತಿ ಧ್ಯಾನ ಪರಂಪರೆಯಲ್ಲಿ 25ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಅವರು ದೇಶ-ವಿದೇಶಗಳಲ್ಲಿ ಧ್ಯಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.