ಬಡಗುಂಡಿಯಲ್ಲಿ ಕರುಳು ಸೇರಿದಂತೆ ಪ್ರಾಣಿಗಳ ಅವಶೇಷ ಪತ್ತೆ : ತನಿಖೆಗೆ ಒತ್ತಾಯ

0
17

ಬಂಟ್ವಾಳ : ಬಿ.ಸಿ.ರೋಡು–ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗುಂಡಿ ಎಂಬಲ್ಲಿ ರಸ್ತೆ ಬದಿಯ ತೋಡಿನಲ್ಲಿ ಪ್ರಾಣಿಗಳ ತ್ಯಾಜ್ಯ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಯಾವುದೋ ಪ್ರಾಣಿಯನ್ನು ವಧೆ ಮಾಡಿದ ಬಳಿಕ ಅದರ ಕರುಳು ಸೇರಿದಂತೆ ಇತರ ತ್ಯಾಜ್ಯ ಭಾಗಗಳನ್ನು ತಂದು ರಸ್ತೆ ಬದಿಯ ತೋಡಿಗೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಗಮನಕ್ಕೆ ಬಂದ ಸ್ಥಳೀಯರು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವೈಜ್ಞಾನಿಕ ಪರೀಕ್ಷೆಗೆ ಒತ್ತಾಯ

ಬಡಗುಂಡಿಯಲ್ಲಿ ಪತ್ತೆಯಾಗಿರುವ ತ್ಯಾಜ್ಯ ವಸ್ತುಗಳ ಕುರಿತು ಅನುಮಾನಗಳಿರುವ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸದಾನಂದ ನಾವೂರು ಒತ್ತಾಯಿಸಿದ್ದಾರೆ.

ಪತ್ತೆಯಾಗಿರುವ ಅವಶೇಷಗಳು ಯಾವ ಪ್ರಾಣಿಗೆ ಸೇರಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿದ್ದಲ್ಲಿ ವೈದ್ಯಕೀಯ ಅಥವಾ ವೈಜ್ಞಾನಿಕ ಪರೀಕ್ಷೆ ನಡೆಸಬೇಕು. ತನಿಖೆಯ ಬಳಿಕ ವಾಸ್ತವಾಂಶ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಕ್ರಮ ಕಸಾಯಿಖಾನೆಗಳ ಬಗ್ಗೆಯೂ ಶಂಕೆ

ಅಕ್ರಮವಾಗಿ ನಡೆಸಲಾಗುತ್ತಿರುವ ಕಸಾಯಿಖಾನೆಗಳಿಂದ ಪ್ರಾಣಿಗಳ ತ್ಯಾಜ್ಯವನ್ನು ತಂದು ರಸ್ತೆ ಬದಿಯ ತೋಡಿಗೆ ಎಸೆದಿರಬಹುದೆಂಬ ಶಂಕೆಯನ್ನೂ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಈಗಾಗಲೇ ಬೀಟ್ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಸದಾನಂದ ನಾವೂರು ತಿಳಿಸಿದ್ದಾರೆ.

ರಸ್ತೆ ಬದಿಯಲ್ಲಿ ಪ್ರಾಣಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಸಾರ್ವಜನಿಕ ಆರೋಗ್ಯ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ದುರ್ವಾಸನೆ ಹಾಗೂ ಸಾಂಕ್ರಾಮಿಕ ರೋಗಗಳ ಆತಂಕವೂ ಎದುರಾಗಬಹುದು ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ತ್ಯಾಜ್ಯವನ್ನು ಯಾರು, ಎಲ್ಲಿಂದ ತಂದು ಎಸೆದಿದ್ದಾರೆ ಎಂಬುದನ್ನು ಪೊಲೀಸರು ಪತ್ತೆಹಚ್ಚಿ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರು ಕಂಡುಬಂದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.