ಉಡುಪಿ : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನೆಟವರ್ಕ್ ಸೌಲಭ್ಯ ಸಮರ್ಪಕವಾಗಿ ಲಭ್ಯವಿಲ್ಲ. ಹೀಗಾಗಿ ಗ್ರಾಹಕರ ಹಿತದೃಷ್ಟಿಯಿಂದ ಪ್ರಸ್ತುತ ಇರುವ ಒಟಿಪಿ ಅವಶ್ಯಕತೆಯ ಪ್ರಮಾಣವನ್ನು ಶೇ.98ರಿಂದ ಶೇ.80ಕ್ಕೆ ಇಳಿಸಬೇಕು. ಇದರಿಂದ ನೆಟವರ್ಕ್ ಸಮಸ್ಯೆ ಇರುವ ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಪಡೆಯಲು ಅನುಕೂಲವಾಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸಂಸದರ ಕಚೇರಿಯಲ್ಲಿ ಜಿಲ್ಲೆಯ ಗ್ಯಾಸ್ ಏಜೆನ್ಸಿಗಳಿಗೆ ಇಂಡಿಯನ್ ಆಯಿಲ್ ಕಾಪೋರ್ರೇಶನ್ ವತಿಯಿಂದ ಮನೆ ಬಳಕೆ ಸಿಲಿಂಡರ್ ಸಮರ್ಪಕವಾಗಿ ಪೂರೈಕೆಯಾಗದಿರುವ ಕುರಿತು ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಕೆಲವು ದಿನಗಳಿಂದ ಮನೆ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗುತ್ತಿರುವ ವಿಳಂಬದಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಜಿಲ್ಲೆಯ ಗ್ಯಾಸ್ ಏಜೆನ್ಸಿಗಳಿಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್ಗಳನ್ನು ಯಾವುದೇ ವಿಳಂಬವಿಲ್ಲದೆ ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ನೆಟವರ್ಕ್ ಸಮಸ್ಯೆ ಇರುವುದರಿಂದ ಸಿಲಿಂಡರ್ ವಿತರಣೆಯ ಸಂದರ್ಭದಲ್ಲಿ ಒಟಿಪಿ ಆಧಾರಿತ ದೃಢೀಕರಣದಲ್ಲಿ ಗ್ರಾಹಕರು ಹಾಗೂ ಏಜೆನ್ಸಿಗಳು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಚರ್ಚಿಸಿದರು. ಗೃಹಬಳಕೆ ಎಲ್ ಪಿ ಜಿ ಅನಿಲ ಪಡೆಯುತ್ತಿರುವ ಇ ಕೆ ವೈ ಸಿ ಮಾಡಿಕೊಳ್ಳಲು ಬಾಕಿ ಇರುವ ಗ್ರಾಹಕರು ಅಗಸ್ಟ್ 31ರೊಳಗೆ ಕಡ್ಡಾಯವಾಗಿ ಮಾಡಿಕೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಉಡುಪಿ ಆಹಾರ ಇಲಾಖೆ ಅಧಿಕಾರಿ ಪ್ರಕಾಶ್, ಐಓಸಿಎಲ್ ಮಾರಾಟ ಅಧಿಕಾರಿ ದೀಪಾ ಮತ್ತು ಗ್ಯಾಸ್ ಏಜೆನ್ಸಿ ಮಾಲೀಕ ಗಣೇಶ್ ರಾವ್, ನಗರಸಭೆಯ ಮಾಜಿ ಅಧ್ಯಕ್ಷ ಕಿರಣ ಕುಮಾರ್ ಮತ್ತಿತರರು ಹಾಜರಿದ್ದರು

