ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಒಟಿಪಿ ನಿಯಮ ಸರಳಗೊಳಿಸಿ: ಸಂಸದ ಕೋಟ

0
87

ಉಡುಪಿ : ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನೆಟವರ್ಕ್​ ಸೌಲಭ್ಯ ಸಮರ್ಪಕವಾಗಿ ಲಭ್ಯವಿಲ್ಲ. ಹೀಗಾಗಿ ಗ್ರಾಹಕರ ಹಿತದೃಷ್ಟಿಯಿಂದ ಪ್ರಸ್ತುತ ಇರುವ ಒಟಿಪಿ ಅವಶ್ಯಕತೆಯ ಪ್ರಮಾಣವನ್ನು ಶೇ.98ರಿಂದ ಶೇ.80ಕ್ಕೆ ಇಳಿಸಬೇಕು. ಇದರಿಂದ ನೆಟವರ್ಕ್​ ಸಮಸ್ಯೆ ಇರುವ ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ ಗ್ಯಾಸ್​ ಸಿಲಿಂಡರ್​ ಪಡೆಯಲು ಅನುಕೂಲವಾಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸಂಸದರ ಕಚೇರಿಯಲ್ಲಿ ಜಿಲ್ಲೆಯ ಗ್ಯಾಸ್​ ಏಜೆನ್ಸಿಗಳಿಗೆ ಇಂಡಿಯನ್​ ಆಯಿಲ್​ ಕಾಪೋರ್ರೇಶನ್​ ವತಿಯಿಂದ ಮನೆ ಬಳಕೆ ಸಿಲಿಂಡರ್​ ಸಮರ್ಪಕವಾಗಿ ಪೂರೈಕೆಯಾಗದಿರುವ ಕುರಿತು ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ಕೆಲವು ದಿನಗಳಿಂದ ಮನೆ ಬಳಕೆ ಸಿಲಿಂಡರ್​ ಪೂರೈಕೆಯಲ್ಲಿ ಉಂಟಾಗುತ್ತಿರುವ ವಿಳಂಬದಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಜಿಲ್ಲೆಯ ಗ್ಯಾಸ್​ ಏಜೆನ್ಸಿಗಳಿಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್ಗಳನ್ನು ಯಾವುದೇ ವಿಳಂಬವಿಲ್ಲದೆ ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್​ ನೆಟವರ್ಕ್​ ಸಮಸ್ಯೆ ಇರುವುದರಿಂದ ಸಿಲಿಂಡರ್​ ವಿತರಣೆಯ ಸಂದರ್ಭದಲ್ಲಿ ಒಟಿಪಿ ಆಧಾರಿತ ದೃಢೀಕರಣದಲ್ಲಿ ಗ್ರಾಹಕರು ಹಾಗೂ ಏಜೆನ್ಸಿಗಳು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಚರ್ಚಿಸಿದರು. ಗೃಹಬಳಕೆ ಎಲ್​ ಪಿ ಜಿ ಅನಿಲ ಪಡೆಯುತ್ತಿರುವ ಇ ಕೆ ವೈ ಸಿ ಮಾಡಿಕೊಳ್ಳಲು ಬಾಕಿ ಇರುವ ಗ್ರಾಹಕರು ಅಗಸ್ಟ್​ 31ರೊಳಗೆ ಕಡ್ಡಾಯವಾಗಿ ಮಾಡಿಕೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಉಡುಪಿ ಆಹಾರ ಇಲಾಖೆ ಅಧಿಕಾರಿ ಪ್ರಕಾಶ್​, ಐಓಸಿಎಲ್​ ಮಾರಾಟ ಅಧಿಕಾರಿ ದೀಪಾ ಮತ್ತು ಗ್ಯಾಸ್​ ಏಜೆನ್ಸಿ ಮಾಲೀಕ ಗಣೇಶ್​ ರಾವ್​, ನಗರಸಭೆಯ ಮಾಜಿ ಅಧ್ಯಕ್ಷ ಕಿರಣ ಕುಮಾರ್​ ಮತ್ತಿತರರು ಹಾಜರಿದ್ದರು