ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಹಫ್ತಾ ವಸೂಲಿ ಬೆದರಿಕೆ; ಇಬ್ಬರು ಆರೋಪಿಗಳ ಬಂಧನ

0
1


ಉಡುಪಿ: ಸುಮಾರು 8 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬರು ವಜ್ರದ ವ್ಯವಹಾರದಲ್ಲಿ ಹಣ ಬಾಕಿ ಇರಿಸಿದ್ದಾರೆ ಎಂದು ಸುಳ್ಳು ಹೇಳಿ, ಅವರ ಕುಟುಂಬಸ್ಥರಿಗೆ ಬೆದರಿಕೆ ಹಾಕಿ 5 ಲಕ್ಷ ರೂ. ಬಲಾತ್ಕಾರದ ಹಣ (ಹಫ್ತಾ) ಬೇಡಿಕೆಯಿಟ್ಟಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶಿವಳ್ಳಿ ಗ್ರಾಮದ ಪರೆಂಪಳ್ಳಿ ರಸ್ತೆಯ ಸಂತೋಷ್ ನಗರ ನಿವಾಸಿ ಸಾಜೀದ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಪನಹಳ್ಳಿ ನಿವಾಸಿ ಸೈಯದ್ ಸೈಫ್ ಅಹಮ್ಮದ್ (40) ಎಂದು ಗುರುತಿಸಲಾಗಿದೆ. ಜುಲೈ 2ರಂದು ಸಂಜೆ ಅಜಿತ್ ಪಾಡಿಯಾರ್ ಎಂಬುವವರ ತಂದೆಗೆ ವಾಟ್ಸ್‌ಆ್ಯಪ್ ಕರೆ ಮಾಡಿದ ವ್ಯಕ್ತಿಯೊಬ್ಬ, “ನಿಮ್ಮ ಮಗ ನಮ್ಮ ಬಳಿ ವಜ್ರದ ವ್ಯವಹಾರ ನಡೆಸಿ 5 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದಾನೆ, ಅದನ್ನು ತಕ್ಷಣ ನೀಡಬೇಕು” ಎಂದು ಪೀಡಿಸಿದ್ದನು. ಅದಕ್ಕೆ ತಮ್ಮ ಮಗ ಅಜಿತ್ 8 ವರ್ಷಗಳ ಹಿಂದೆಯೇ ತೀರಿಹೋಗಿದ್ದು, ಈ ವ್ಯವಹಾರದ ಬಗ್ಗೆ ತಮಗೆ ಏನೂ ತಿಳಿದಿಲ್ಲವೆಂದು ಹಣ ನೀಡಲು ನಿರಾಕರಿಸಿದ್ದರು. ಇದಾದ ಕೆಲವೇ ಸಮಯದಲ್ಲಿ ದುಬಾಯಿಯಲ್ಲಿದ್ದ ಅಜಿತ್‌ ತಮ್ಮ ಅಮೀತ್ ಅವರಿಗೂ ವಾಟ್ಸ್‌ಆ್ಯಪ್ ಕರೆ ಮಾಡಿದ ಆರೋಪಿಗಳು, ಅಜಿತ್ ಬಾಕಿ ಇಟ್ಟಿರುವ 5 ಲಕ್ಷ ರೂ. ಕೊಡದಿದ್ದರೆ ಊರಿನಲ್ಲಿರುವ ನಿನ್ನ ಹೆಂಡತಿಗೆ ತೊಂದರೆ ನೀಡುತ್ತೇವೆ ಎಂದು ಪ್ರಾಣ ಬೆದರಿಕೆ ಒಡ್ಡಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೋಲಿಸ್ ತನಿಖೆ
ಪೊಲೀಸರ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಸಾಜೀದ್ ಹಾಗೂ ಸೈಯದ್ ಸೈಫ್ ಅಹಮ್ಮದ್ ಅವರನ್ನು ಬಂಧಿಸಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೈಯದ್ ಸೈಫ್ ಅಹಮ್ಮದ್‌ ಎಂಬಾತನನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.