
ಉಡುಪಿ: ಪುತ್ತೂರು ಸೇರಿದಂತೆ ನಗರದ ವಿವಿಧೆಡೆ ಸರಣಿ ಮನೆಗಳ್ಳತನ ಎಸಗುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 23,56,230 ರೂ. ಮೌಲ್ಯದ ಚಿನ್ನಾಭರಣ, ವಿದೇಶಿ ಕರೆನ್ಸಿ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಪೆರಂಪಳ್ಳಿ ಕುಂಜಿಬೆಟ್ಟುವಿನ ಅರುಣ್ ಎಸ್.ವಿ. ಅಲಿಯಾಸ್ ಅರುಣ್ ಆಚಾರಿ (43) ಹಾಗೂ ಗರಡಿಮಜಲು ತೆಂಕನಿಡಿಯೂರಿನ ಕೌಶೀಕ್ (19) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಪುತ್ತೂರು ಗ್ರಾಮದ ಭಗವತಿ ಲೇಔಟ್ ನಿವಾಸಿ ಸನಂ ಎಂಬುವರು ದುಬಾಯಿಯಿಂದ ಊರಿಗೆ ಬಂದಿದ್ದು, ಆಗಸ್ಟ್ 8ರಂದು ಸಂಬಂಧಿಕರ ಮನೆಗೆ ತೆರಳಿದ್ದರು. ಆಗಸ್ಟ್ 11ರಂದು ವಾಪಸ್ ಬಂದು ನೋಡಿದಾಗ ಮನೆಯ ಟೆರೇಸ್ ಬಾಗಿಲು ಮುರಿದು, ಕಪಾಟಿನಲ್ಲಿದ್ದ 10,000 ಎಇಡಿ (ಯುಎಇ ಧಿರಾಮ್) ಹಾಗೂ 14,000 ರೂ. ಸೇರಿದಂತೆ ಒಟ್ಟು 2,14,000 ರೂ. ಮೌಲ್ಯದ ಹಣ ಕಳುವಾಗಿತ್ತು. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಳ್ಳರ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಆಗಸ್ಟ್ 23ರಂದು ಪೆರಂಪಳ್ಳಿಯ ಸಂತೋಷ ನಗರದಲ್ಲಿ ಇಬ್ಬರೂ ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
5 ಕಳ್ಳತನ ಪ್ರಕರಣಗಳ ಪತ್ತೆ
ಆರೋಪಿಗಳು ಕಳವು ಮಾಡಿದ ಬೈಕ್‌ನಲ್ಲಿ ತೆರಳಿ, ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. ಉಡುಪಿ ನಗರ ಠಾಣೆ ವ್ಯಾಪ್ತಿಯ 2 ಹಾಗೂ ಮಲ್ಪೆ ಠಾಣೆ ವ್ಯಾಪ್ತಿಯ 3 (ಒಂದು ಬೈಕ್ ಕಳ್ಳತನ ಸೇರಿ) ಪ್ರಕರಣಗಳು ಸೇರಿದಂತೆ ಒಟ್ಟು 5 ಮನೆಗಳ್ಳತನ ಮಾಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಮೊದಲನೇ ಆರೋಪಿ ಅರುಣ್ ಆಚಾರಿ ಈ ಹಿಂದೆ ಮಣಿಪಾಲ ಠಾಣೆಯ ಪೋಕ್ಸೋ (POCSO) ಪ್ರಕರಣವೊಂದರಲ್ಲಿ 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದು, ಜುಲೈ 2025ರಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಸ್ವಾಧೀನಪಡಿಸಿಕೊಂಡ ವಸ್ತುಗಳ ವಿವರ
13.26 ಲಕ್ಷ ಮೌಲ್ಯದ 88.400 ಗ್ರಾಂ ತೂಕದ ಚಿನ್ನ ಹಾಗೂ 22,500 ಮೌಲ್ಯದ 1.45 ಗ್ರಾಂ ತೂಕದ ಚಿನ್ನದ ನಾಣ್ಯಗಳು, 2.86 ಲಕ್ಷಕ್ಕೂ ಅಧಿಕ ಮೌಲ್ಯದ 1 ಕೆಜಿ 360 ಗ್ರಾಂ ತೂಕದ ಬೆಳ್ಳಿ ಆಭರಣಗಳು, 2 ಲಕ್ಷ ಅಂದಾಜು ಮೌಲ್ಯದ ವಿದೇಶಿ ಕರೆನ್ಸಿ ನೋಟುಗಳು ಹಾಗೂ 33,000 ನಗದು ಹಣ, ಕಳ್ಳತನ ಮತ್ತು ಕೃತ್ಯ ಎಸಗಲು ಬಳಸಿದ್ದ 4 ಲಕ್ಷ ಮೌಲ್ಯದ ಒಂದು ಆಟೋರಿಕ್ಷಾ ಹಾಗೂ 45,000 ಮೌಲ್ಯದ ಕಳವು ಮಾಡಿದ್ದ ಪಲ್ಸರ್ ಬೈಕ್, 30,000 ಮೌಲ್ಯದ 1 ವಿದೇಶಿ ಕೈಗಡಿಯಾರ ಮತ್ತು 13,000 ಮೌಲ್ಯದ 2 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

