ಎನ್.ಎಸ್.ಎಸ್. ಉದ್ಘಾಟನಾ ಕಾರ್ಯಕ್ರಮ

0
5

ಬಂಟ್ವಾಳ : ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಸೇವಾ ಮನೋಭಾವವನ್ನು ಬೆಳೆಸಿಕೊಂಡಾಗ ಮಾತ್ರ ವಿದ್ಯೆಗೆ ನಿಜವಾದ ಮಹತ್ವ ಬರುತ್ತದೆ. ಯುವಜನತೆ ತಮ್ಮೊಂದಿಗೆ ಸಮಾಜದ ಇತರೆ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಮನಸ್ಥಿತಿಯನ್ನು ಹೊಂದಬೇಕು ಎಂದು ಬಂಟ್ವಾಳದ ಬಿ.ಆರ್.ಎಂ.ಪಿ.ಸಿ. ಶಾಲೆಯ ಶಿಕ್ಷಕರಾದ ಮನೋಹರ ಎಸ್. ದೊಡಮನಿ ಹೇಳಿದರು.

ಅವರು ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಆಯೋಜಿಸಿದ್ದ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಯುವಜನತೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಮುನ್ನಡೆದಾಗ ದೇಶದ ಅಭಿವೃದ್ಧಿಗೆ ವೇಗ ದೊರೆಯುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಡಿ. ಮಂಚಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಎನ್.ಎಸ್.ಎಸ್. ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಗುಣ, ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ವಿಕಸನಗೊಳಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಘಟಕ ನಾಯಕರಾದ ಕು. ಪ್ರಾಜ್ಞವಿ ಹಾಗೂ ಅಲ್ವಿನ್ ಡಿಸೋಜಾ ಉಪಸ್ಥಿತರಿದ್ದರು.

ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಕಾಶೀನಾಥ ಶಾಸ್ತ್ರಿ ಹೆಚ್.ವಿ. ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಕು. ಕಾವ್ಯಾ ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಕು. ನಿರೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ನಿಧಿ ಮತ್ತು ತಂಡ ಪ್ರಾರ್ಥನೆ ಸಲ್ಲಿಸಿದರು.