ಬೆಂಗಳೂರು : ನಾಡಿನ ಜನರ ರಕ್ಷಣೆ ಮಾಡುವ ಪೊಲೀಸರ ಕಲ್ಯಾಣಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕ ಪೊಲೀಸರ ಸಂಕಷ್ಟ ಭತ್ಯೆಯನ್ನು ಶೇ.50ರಷ್ಟು ಹೆಚ್ಚಿಸಲು ಸರ್ಕಾರ ಸಮ್ಮತಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪೊಲೀಸರಿಗಾಗಿ ಆಯೋಜಿಸಲಾಗಿದ್ದ ಸಮಗ್ರ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪೊಲೀಸರ ಆರ್ಥಿಕ ಅಗತ್ಯಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಗೃಹ ಇಲಾಖೆಯ ಮೂಲಕ ಪೊಲೀಸರಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಎನ್‌ಎಸ್‌ಜಿ ತರಬೇತಿಯಿಂದ ಪೊಲೀಸರ ಸಾಮರ್ಥ್ಯ ವೃದ್ಧಿ
ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ನೀಡುತ್ತಿರುವ ತರಬೇತಿಯ ಸದುಪಯೋಗ ಪಡೆದುಕೊಂಡು ರಾಜ್ಯದ ಜನರ ರಕ್ಷಣೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಿಎಂ ಕರೆ ನೀಡಿದರು. ಸಜ್ಜನರನ್ನು ರಕ್ಷಿಸುವುದು ಹಾಗೂ ದುರ್ಜನರನ್ನು ಶಿಕ್ಷಿಸುವುದು ಪೊಲೀಸರ ಪ್ರಮುಖ ಕರ್ತವ್ಯವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಎನ್‌ಎಸ್‌ಜಿಯಿಂದ ದೊರೆಯುವ ತರಬೇತಿ ರಾಜ್ಯ ಪೊಲೀಸರ ಕೌಶಲ್ಯ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದೆ. ತರಬೇತಿಯ ಮೂಲಕ ಪಡೆದ ಜ್ಞಾನವನ್ನು ಸಮಾಜದ ಶಾಂತಿ, ಭದ್ರತೆ ಮತ್ತು ಜನರ ರಕ್ಷಣೆಗೆ ಬಳಸಬೇಕು ಎಂದು ಹೇಳಿದರು.
ಕರ್ನಾಟಕ ಪೊಲೀಸ್ ದೇಶದ ಹೆಮ್ಮೆ
ಕರ್ನಾಟಕ ಪೊಲೀಸ್ ಪಡೆ ದೇಶದಲ್ಲೇ ತನ್ನ ದಕ್ಷತೆ, ಕಾರ್ಯಪರತೆ ಹಾಗೂ ಕರ್ತವ್ಯನಿಷ್ಠೆಗೆ ಹೆಸರುವಾಸಿಯಾಗಿದೆ. ಸಂಕಷ್ಟದ ಸಂದರ್ಭಗಳಲ್ಲಿ ಪೊಲೀಸರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜನರ ರಕ್ಷಣೆಗೆ ಧಾವಿಸುತ್ತಾರೆ. ಗಡಿಯಲ್ಲಿರುವ ಸೈನಿಕರು ದೇಶವನ್ನು ರಕ್ಷಿಸುವಂತೆ, ಗಡಿಯೊಳಗೆ ಪೊಲೀಸರು ಸಮಾಜದ ಸುರಕ್ಷತೆಯನ್ನು ಕಾಪಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪೊಲೀಸರ ಸೇವೆಯನ್ನು ಶ್ಲಾಘಿಸಿದರು.
35 ವರ್ಷಗಳ ಹಿಂದೆ ಗೃಹ ಇಲಾಖೆಗೆ ಸಂಬಂಧಿಸಿದ ಜವಾಬ್ದಾರಿ ಹೊಂದಿದ್ದ ಸಂದರ್ಭದಲ್ಲಿಯೇ ಪೊಲೀಸರ ಕರ್ತವ್ಯ ಹಾಗೂ ಸಂಕಷ್ಟಗಳ ಬಗ್ಗೆ ಸಾಕಷ್ಟು ಅರಿವು ಹೊಂದಿದ್ದೇನೆ. ಹಗಲು-ರಾತ್ರಿ ಎನ್ನದೆ ಪೊಲೀಸರು ಸೇವೆ ಸಲ್ಲಿಸುತ್ತಿದ್ದು, ಕೆಲವೊಮ್ಮೆ ರಾಜಕಾರಣಿಗಳಿಂದಲೂ ಟೀಕೆ ಎದುರಿಸಬೇಕಾಗುತ್ತದೆ. ಆದರೂ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ದೇಶದ ಸಮಗ್ರತೆ, ಐಕ್ಯತೆ ಮತ್ತು ಶಾಂತಿಯನ್ನು ಕಾಪಾಡುವುದು ಪೊಲೀಸರ ಕರ್ತವ್ಯವಾಗಿದೆ ಎಂದರು.
ಸೈಬರ್ ಅಪರಾಧ ನಿಯಂತ್ರಣಕ್ಕೆ ತಂತ್ರಜ್ಞಾನ ಬಳಕೆ
ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಹೊಸ ತಂತ್ರಜ್ಞಾನಗಳೊಂದಿಗೆ ನಿರಂತರವಾಗಿ ಅಪ್‌ಡೇಟ್ ಆಗಬೇಕು ಎಂದು ಸಿಎಂ ಹೇಳಿದರು. ಅಪರಾಧ ನಿಯಂತ್ರಣ ಹಾಗೂ ದೇಶದ ಭದ್ರತೆಗಾಗಿ ಡ್ರೋನ್ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ ಎಂದರು.
ಬೆಂಗಳೂರು ಜಾಗತಿಕ ನಗರವಾಗಿ ಬೆಳೆಯುತ್ತಿದ್ದು, ವಿಶ್ವದ ಹಲವು ಪ್ರಮುಖ ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿದೇಶಗಳಿಂದಲೂ ಸಾವಿರಾರು ಮಂದಿ ಬೆಂಗಳೂರಿಗೆ ಆಗಮಿಸಿ ನೆಲೆಸಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸುವುದು ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಗಗನಚುಂಬಿ ಕಟ್ಟಡಗಳ ಮೇಲೆ ಹೆಲಿಪ್ಯಾಡ್ ನಿರ್ಮಾಣಕ್ಕೆ ಚಿಂತನೆ
ಬೆಂಗಳೂರಿನಲ್ಲಿ ಗಗನಚುಂಬಿ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಸಂದರ್ಭಗಳಲ್ಲಿ ನಾಗರಿಕರ ರಕ್ಷಣೆಗೆ ಹೊಸ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಕಿ ಅವಘಡ, ಭಯೋತ್ಪಾದನಾ ದಾಳಿ ಅಥವಾ ಇತರ ತುರ್ತು ಪರಿಸ್ಥಿತಿಗಳಲ್ಲಿ ಮೇಲ್ಛಾವಣಿಯ ಹೆಲಿಪ್ಯಾಡ್‌ಗಳನ್ನು ಬಳಸಿಕೊಂಡು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಮಿಲಿಟರಿ ಹಾಗೂ ವಾಯುಪಡೆ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕುರಿತು ಗೃಹ ಸಚಿವರು ಮಾತುಕತೆ ನಡೆಸಲಿದ್ದಾರೆ ಎಂದರು.
ಗಗನಚುಂಬಿ ಕಟ್ಟಡಗಳ ನಿರ್ಮಾಣದ ವೇಳೆ ಹೆಲಿಪ್ಯಾಡ್‌ಗಳಿಗೆ ಅಗತ್ಯವಿರುವ ಸ್ಥಳಾವಕಾಶ ಕಲ್ಪಿಸುವಂತೆ ಬಿಲ್ಡರ್‌ಗಳು ಹಾಗೂ ಡೆವಲಪರ್‌ಗಳಿಗೆ ಮನವಿ ಮಾಡಿದ ಅವರು, ಕಾನೂನು ಚೌಕಟ್ಟಿನೊಳಗೆ ಅಗತ್ಯ ಅನುಮತಿಗಳನ್ನು ನೀಡಲು ಸರ್ಕಾರ ಸಹಕರಿಸಲಿದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಯಲ್ಲೂ ರೌಡಿ ನಿಗ್ರಹ ಪಡೆ
ರಾಜ್ಯದಲ್ಲಿ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬೆಂಗಳೂರು ಸೇರಿದಂತೆ ಪ್ರತಿಯೊಂದು ಜಿಲ್ಲೆಯಲ್ಲೂ ಪ್ರತ್ಯೇಕ ರೌಡಿ ನಿಗ್ರಹ ಪಡೆ ರಚಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ಈ ತಂಡಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಲಿವೆ. ಸಮಾಜದಲ್ಲಿ ಶಾಂತಿ, ಸ್ವಾಸ್ಥ್ಯ ಹಾಗೂ ಜನರ ಸುರಕ್ಷತೆ ಕಾಪಾಡುವುದು ಈ ಪಡೆಗಳ ಪ್ರಮುಖ ಉದ್ದೇಶವಾಗಿದೆ ಎಂದರು.
ಪೊಲೀಸರ ವಸತಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ
ಪೊಲೀಸರ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡುವುದರ ಜೊತೆಗೆ ಅವರಿಗೆ ಹೆಚ್ಚಿನ ವಸತಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಕರ್ನಾಟಕದ ಪೊಲೀಸರು ದೇಶದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಕರ್ನಾಟಕ ಬಲಗೊಂಡರೆ ದೇಶವೂ ಬಲಗೊಳ್ಳುತ್ತದೆ. ವಿಶ್ವವೇ ಕರ್ನಾಟಕದತ್ತ ನೋಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪೊಲೀಸ್ ಇಲಾಖೆಯ ಮೇಲಿನ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

