ಭಾರತ್ ಜೋಡೋ ಯುವ ಸಂಘಟನೆಗೆ ಯುವಕರ ನೋಂದಣಿಗೆ ಕಾಂಗ್ರೆಸ್‌ನಿಂದ ಆಂದೋಲನ ರೂಪದ ಕಾರ್ಯಕ್ರಮ : ಐವನ್ ಡಿʼಸೋಜಾ

0
11

ಮಂಗಳೂರು : ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ವಾರ್ಡ್‌ನಲ್ಲೂ ಭಾರತ್ ಜೋಡೋ ಯುವ ಸಂಘಟನೆಗಳನ್ನು ರಚಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ನೋಂದಾಯಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಆಂದೋಲನ ರೂಪದ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಸಂಘಟನೆಯ ಉಸ್ತುವಾರಿ ಐವನ್ ಡಿʼಸೋಜಾ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋ-ಆರ್ಡಿನೇಟರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ 10 ಸಾವಿರ ಜನಸಂಖ್ಯೆಗೆ ಒಂದು ಭಾರತ್ ಜೋಡೋ ಯುವ ಸಂಘಟನೆಯನ್ನು ರಚಿಸುವ ಗುರಿ ಹೊಂದಲಾಗಿದೆ. ಯುವಕರಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಂಪ್ರದಾಯಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಈಗಾಗಲೇ ಪ್ರತಿ ಸಂಘಟನೆಗೆ ರೂ.10 ಲಕ್ಷಗಳ ಅನುದಾನ ನೀಡುವ ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಯುವ ಸಂಘಟನೆಗಳು ಈ ಅನುದಾನವನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಂಡು ಸ್ಥಳೀಯ ಮಟ್ಟದಲ್ಲಿ ಯುವಕರಿಗೆ ಪೂರಕವಾದ ಚಟುವಟಿಕೆಗಳನ್ನು ನಡೆಸಬೇಕು ಎಂದು ಐವನ್ ಡಿʼಸೋಜಾ ಹೇಳಿದರು.

ಪ್ರತಿಯೊಂದು ವಾರ್ಡ್‌ನಲ್ಲೂ ಯುವ ಸಂಘಟನೆಗಳನ್ನು ಶೀಘ್ರವಾಗಿ ರಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಆಫ್‌ಲೈನ್ ಮೂಲಕ ಯುವಕರ ಅರ್ಜಿಗಳನ್ನು ಭರ್ತಿ ಮಾಡಿಸಿ, ಎಲ್ಲ ಸಮುದಾಯಗಳ ಯುವಕರನ್ನು ಒಳಗೊಂಡ ಭಾರತ್ ಜೋಡೋ ಯುವ ಸಂಘಟನೆಗಳನ್ನು ರಚಿಸಬೇಕು ಎಂದು ಅವರು ಸೂಚಿಸಿದರು.

ಮುಂದಿನ ಪೀಳಿಗೆಯಲ್ಲಿ ಯುವ ನಾಯಕತ್ವವನ್ನು ಬೆಳೆಸುವಲ್ಲಿ ಭಾರತ್ ಜೋಡೋ ಯುವ ಸಂಘಟನೆಗಳು ಪ್ರಮುಖ ಪಾತ್ರ ವಹಿಸಲಿವೆ. ಯುವಕರ ಪ್ರತಿಭೆ, ಸಾಮರ್ಥ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ SIR ಪ್ರಕ್ರಿಯೆಯಲ್ಲಿ ಹೆಸರು ನೋಂದಣಿ ಹಾಗೂ ಹೆಸರು ಬಿಟ್ಟುಹೋಗಿರುವ ಕುರಿತು ಉಂಟಾದ ಸಮಸ್ಯೆಗಳನ್ನು ಕಂದಾಯ ವಿಭಾಗದ ಇನ್ಸ್‌ಪೆಕ್ಟರ್ ಸಂತೋಷ್ ಅವರ ಗಮನಕ್ಕೆ ತಂದು ಪರಿಹರಿಸಲಾಯಿತು. ಈ ಕುರಿತು ನೋಡೆಲ್ ಅಧಿಕಾರಿ ಶಾಹಿದಾ ನಜೀರಾ ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಕಾರ್ಪೊರೇಟರ್‌ಗಳಾದ ಪ್ರವೀಣ್ ಚಂದ್ರ ಆಳ್ವ, ಶಂಶುದ್ದೀನ್ ಕುದ್ರೋಳಿ, ಕೇಶವ ಮರೋಳಿ, ಅಶೋಕ್ ಕುಮಾರ್ ಡಿ.ಕೆ., ಭಾಸ್ಕರ್ ರಾವ್, ಸತೀಶ್ ಪೆಂಗಲ್, ತನ್ವೀರ್ ಶಾ, ಚೇತನ್ ಕುಮಾರ್ ಹಾಗೂ ಹೇಮಂತ್ ಗರೋಡಿ, ತರಬೇತಿಗಾರರಾದ ದುರ್ಗಾ ಪ್ರಸಾದ್ ಹಾಗೂ ಅಮಿತಾ ಅಶ್ವಿನ್ ಉಪಸ್ಥಿತರಿದ್ದರು.

ಕೋ-ಆರ್ಡಿನೇಟರ್‌ಗಳಾದ ನೀತು ಡಿಸೋಜಾ, ಹಬೀಬುಲ್ಲಾ ಕಣ್ಣೂರು, ರಾಬರ್ಟ್ ಡಿಸೋಜಾ, ನವಾಜ್ ಜಪ್ಪು, ದಿನೇಶ್ ರಾವ್, ಕವಿತಾ ವಾಸು, ನೆಲ್ಸನ್ ರೋಚೆ, ಓಸ್ವಾಲ್ಡ್ ಫರ್ಟಾಡೋ, ಅಶ್ರಫ್ ಬೆಂಗ್ರೆ, ರಿತೇಶ್ ಅಂಚನ್, ವೆಲ್ವಿನ್ ಕ್ಯಾಸ್ಟೆಲಿನೋ, ವಹಾಬ್ ಕುದ್ರೋಳಿ, ಕ್ಲೈಡ್, ಲಾನ್ಸಿ ರಸ್ರಾಡೋ, ಅಮೃತ್ ಕದ್ರಿ, ಆಶಾಲತಾ, ಗಿರೀಶ್ ಶೆಟ್ಟಿ ಹಾಗೂ ಶಂಶುದ್ದೀನ್ ಸೇರಿದಂತೆ ನಾಯಕರಾದ ಜೇಮ್ಸ್ ಪ್ರವೀಣ್, ಶಾಂತಲ ಗಟ್ಟಿ ಹಾಗೂ ನ್ಯಾನ್ಸಿ ಉಪಸ್ಥಿತರಿದ್ದರು.