0
5

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜೈನ ಸಮಾಜದ ಧರ್ಮಗುರುಗಳಿಂದ ಭೇಟಿ; ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ

ಬೆಂಗಳೂರು, ಆ.31: ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜೈನ ಸಮಾಜದ ಪ್ರಮುಖ ಧರ್ಮಗುರುಗಳು ಹಾಗೂ ಗಣ್ಯರು ಸೋಮವಾರ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಮಧ್ಯಾಹ್ನ 2 ಗಂಟೆಗೆ ಆರಂಭವಾದ ಸುಮಾರು 30 ನಿಮಿಷಗಳ ಸಭೆಯಲ್ಲಿ ಸಮಸ್ತ ಜೈನ ಸಮಾಜದ ಪರವಾಗಿ ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರು, ವರೂರು-ಹುಬ್ಬಳ್ಳಿ, ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕರು, ಕೊಲ್ಲಾಪುರ ಹಾಗೂ ಶ್ರೀ ಭಾನುಕೀರ್ತಿ ಭಟ್ಟಾರಕರು, ಕಂಬದಹಳ್ಳಿ ಅವರು ಮುಖ್ಯಮಂತ್ರಿಗಳನ್ನು ಗೌರವಿಸಿ, ಹರಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಸ್ಮರಣಿಕೆಯಾಗಿ ರವಿ ಷೇಣ ಆಚಾರ್ಯ ರಚಿತ ‘ಶ್ರೀ ಜೀವಂಧರ ಕುಮಾರ್’ ಕೃತಿಯ ಕನ್ನಡ ಅನುವಾದವಾಗಿರುವ ‘ಅಧ್ಯಾತ್ಮ ಯೋಗಿ ಶ್ರೀ ರಾಮ’ ಗ್ರಂಥವನ್ನು ಮುಖ್ಯಮಂತ್ರಿಗಳಿಗೆ ನೀಡಲಾಯಿತು. ಶಾಸ್ತ್ರ ಸ್ವಾಧ್ಯಾಯ ಹಾಗೂ ಅಧ್ಯಾತ್ಮಿಕ ಚಿಂತನೆಗೆ ಪೂರಕವಾಗುವ ಈ ಗ್ರಂಥವನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳಿಗೆ ಧರ್ಮಗುರುಗಳು ಶುಭ ಹಾರೈಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಡಳಿತಾವಧಿಯಲ್ಲಿ ರಾಜ್ಯದ ಸರ್ವರಿಗೂ ಒಳಿತಾಗಲಿ ಹಾಗೂ ನಾಡಿನಲ್ಲಿ ರಾಮರಾಜ್ಯದಂತಹ ಉತ್ತಮ ಆಡಳಿತ ನೆಲೆಸಲಿ ಎಂದು ಧರ್ಮಗುರುಗಳು ಪ್ರಾರ್ಥಿಸಿದರು.

ಇದೇ ಸಂದರ್ಭದಲ್ಲಿ ಜೈನ ಸಮಾಜದ ಪ್ರಮುಖ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲಾಯಿತು. ವಿಶೇಷವಾಗಿ ಜೈನ ನಿಗಮ-ಮಂಡಳಿ ಸೇರಿದಂತೆ ಸಮಾಜಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.

ಜೈನ ಸಮಾಜದ ಬೇಡಿಕೆಗಳ ಪಟ್ಟಿಯನ್ನು ಪರಿಶೀಲಿಸಿ, ಸಂಬಂಧಪಟ್ಟ ವಿಚಾರಗಳ ಕುರಿತು ವಿಚಾರಿಸಿ ಸೂಕ್ತವಾಗಿ ತಿಳಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ್ ಪಾಟೀಲ್, ಮಗಡುಮ್, ವಿನೋದ್ ದೊಡ್ಡಣ್ಣವರ್, ರಾಜಕೀರ್ತಿ ಅರುಣ್ ಯಲಗುದ್ರಿ, ಮುನ್ನೋಳಿ ವಕೀಲರು, ಆಶಾ ಪ್ರಭು, ಹರ್ಷೇಂದ್ರ ಜೈನ್ ಸೇರಿದಂತೆ ಕರ್ನಾಟಕ ಜೈನ ಅಸೋಸಿಯೇಷನ್‌ನ ಪದಾಧಿಕಾರಿಗಳಾದ ಆಶೀಶ್ ಜೈನ್ ಹಾಗೂ ನೇಹಾ ಜೈನ್ ಉಪಸ್ಥಿತರಿದ್ದರು.