ಕಸ್ತೂರಿ ರಂಗನ್ ವರದಿಯಲ್ಲಿರುವ ಸಾಧಕ- ಭಾದಕ ಪರಿಶೀಲನೆ: ಜಿಲ್ಲಾಧಿಕಾರಿ

0
12

ಉಡುಪಿ: ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ಆಧಾರದ ಮೇಲೆ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿರುವ ಕರಡು ಅಧಿಸೂಚನೆ ವರದಿಯ ಅನ್ವಯ ಸಾಧಕ ಬಾಧಕಗಳನ್ನು ಪರಿಶೀಲಿಸಿ, ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಸರ ಸೂಕ್ಷ್ಮ ಪ್ರದೇಶ (ಕಸ್ತೂರಿ ರಂಗನ್ ವರದಿ ಆಧಾರಿತ)ಕ್ಕೆ ಸಂಬAಧಿಸಿದಂತೆ ನಡೆದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸರ್ಕಾರದ ಅರಣ್ಯ ಕಾಯಿದೆಗಳು ಅರಣ್ಯ ಇಲಾಖೆಯ ನೀತಿ ನಿಯಮಗಳಿಂದ ನಿರಂತರ ತೊಂದರೆಗೊಳಗಾಗುತ್ತಿರುವ ಕಾಡಂಚಿನ ಭಾಗದ ಜನರಿಗೆ ಇನ್ನೂ ಕಸ್ತೂರಿ ರಂಗನ್ ವರದಿ ಜಾರಿಗೆ ಮುಂದಾಗಿರುವುದು ಈ ಭಾಗದ ಜನರ ಜೀವನ ಹಾಗೂ ಜೀವನೋಪಾಯಕ್ಕೆ ತೊಂದರೆ ಉಂಟಾಗುತ್ತಿದೆ ಎಂಬ ಆತಂಕ ಹಾಗೂ ಮತ್ತಿತರ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕುತ್ತು ಉಂಟಾಗುವ ಸಾಧ್ಯತೆ ಇದೆ ಎಂದು ಗೊಂದಲಗಳಿವೆ. ಆದರೆ, ಡಾ. ಕೆ. ಕಸ್ತೂರಿ ರಂಗನ್ ಕರಡು ಪ್ರತಿಯಲ್ಲಿ ಕೋರೆ, ಕೈಗಾರಿಕೆ, ಬಹುಮಹಡಿ ಕಟ್ಟಡಗಳು, ಟೌನ್‌ಶಿಪ್, ಥರ್ಮಲ್ ಪವರ್ ಪ್ಲಾಂಟ್ ಹಾಗೂ ಏರಿಯಾ ಡೆವಲಪ್‌ಮೆಂಟ್ ಪ್ರೋಜೆಕ್ಟ್ಗಳಿಗೆ ನಿರ್ಬಂಧ ವಿರುವುದಾಗಿ ತಿಳಿಸಿದ್ದು, ಪೂರ್ವಾಪರಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ, ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಈಗಾಗಲೇ 7 ಬಾರಿ ಅಧಿಸೂಚನೆಯನ್ನು ಹೊರಡಿಸಿದೆ. ಇದರಿಂದ ಕಾಡಿನಲ್ಲಿ ವಾಸಿಸುವ ಮಲೆಕುಡಿಯ, ಕೊರಗ ಸೇರಿದಂತೆ ಮತ್ತಿತರ ಬುಡಕಟ್ಟು ಜನಾಂಗದ ಅನೇಕ ಕುಟುಂಬಗಳನ್ನು ಆತಂಕಕ್ಕೆ ಈಡು ಮಾಡಿದೆ. ಅನೇಕ ವರ್ಷಗಳಿಂದ ಪ್ರಕೃತಿಯೊಂದಿಗೆ ಸಮತೋಲಿತ ಜೀವನ ಶೈಲಿ ಅಳವಡಿಸಿಕೊಂಡು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಗೌರವಿಸುತ್ತಲೇ ಬದುಕುತ್ತಿದ್ದಾರೆ. ಈ ಅನೋನ್ಯ ಭಾವ ಇಂದಿಗೂ ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುತ್ತಿವೆ. ಪರಿಸರ ಸಂರಕ್ಷಣೆಯೂ ನಮ್ಮ ಆದ್ಯತೆಯಾಗಬೇಕು. ಇದನ್ನು ಗಮನಹರಿಸಲಾಗುವುದು ಎಂದರು.
ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕಾರ್ಕಳದ 13 ಹಾಗೂ ಕುಂದಾಪುರದ 22 ಸೇರಿದಂತೆ ಒಟ್ಟು 35 ಹಳ್ಳಿಗಳು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಳಪಡಲಿವೆ. ಪರಿಸರ ಸೂಕ್ಷ್ಮ ಪ್ರದೇಶದ ಮಧ್ಯ ಭಾಗದಲ್ಲಿಯೂ ವಸತಿ ಪ್ರದೇಶವಿರುವುದರಿಂದ ಕೂಲಂಕುಷವಾಗಿ ಪರಿಶೀಲಿಸಬೇಕಿದೆ ಎಂದರು.
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ ಮಾತನಾಡಿ, ಸರಕಾರಗಳು ಜಾರಿಗೆ ತರುವ ನೀತಿ ನಿಯಮಗಳು ಹಾಗೂ ಕಾನೂನುಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲೆ ಇರುತ್ತದೆ. ಪಶ್ಚಿಮ ಘಟ್ಟಗಳ ಸಂರಕ್ಷಣೆ ಬಗ್ಗೆ ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿಯಿಂದ ಕೃಷಿ, ಪರಿಸರ, ಸಾರ್ವಜನಿಕರ ದೈನಂದಿನ ಬದುಕಿನ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ಸಮಗ್ರವಾಗಿ ವಿಶ್ಲೇಷಿಸುವ ಅಗತ್ಯವಿದೆ ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ಯಾವುದೇ ಜನಪರ ಕಾಯಿದೆಗಳು ಜಾರಿಗೆ ಬಂದಾಗ ಅದು ಜನರ ಒಳಿತಿಗೆ ಅನುಗುಣವಾಗಿ ಇರಬೇಕು. ಸೂಕ್ಷ್ಮತೆಯನ್ನು ಅರಿತು ಪರಿಸರವನ್ನು ಕಾಪಾಡಿದ್ದಲ್ಲಿ ಮಾತ್ರ ಮನುಕುಲ ಉಳಿಯಲು ಸಾಧ್ಯ. ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸರ್ವೇ ನಂಬರ್‌ಗಳನ್ನು ಅಳವಡಿಸಿದಲ್ಲಿ ಪರಿಸರ ರಕ್ಷಣೆ ಮಾಡಬಹುದು. ಎಲ್ಲಾ ಸೂಕ್ಷö್ಮತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಜನಾಂಗ ಬದುಕಲು ಅನುಕೂಲ ಮಾಡಿಕೊಡಬೇಕು ಎಂದರು.
ಶಾಸಕ ಸುನಿಲ್ ಕುಮಾರ್ ಮಾತನಾಡಿ, ಡಾ. ಕೆ. ಕಸ್ತೂರಿ ರಂಗನ್ ಕರಡು ಅಧಿಸೂಚನೆಯನ್ನು ನಾವುಗಳು ವಿರೋಧಿಸುತ್ತೇವೆ. ಪ್ರತಿರೋಧವನ್ನು ಸರ್ಕಾರದ ಗಮನಕ್ಕೆ ತರಬೇಕು. ಪರಿಸರ ಸೂಕ್ಷö್ಮ ವಲಯವು ವಸತಿ ಪ್ರದೇಶದಿಂದ ಹೊರಗಿರಬೇಕು. ಜಿಲ್ಲೆಯ 35 ಗ್ರಾಮಗಳ ಜನರ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ಸರಿಯಾದ ಭೌತಿಕ ಸರ್ವೇ ಮಾಡಿ, ವರದಿಯನ್ನು ಕಳುಹಿಸುವಂತೆ ತಿಳಿಸಿದರು.
ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸರಕಾರಗಳು ಜಾರಿಗೆ ತರುವ ಕೆಲವು ಕಾನೂನುಗಳು ಜನಸಾಮಾನ್ಯರ ಮೇಲೆ ದುಷ್ಪರಿಣಾಮಗಳು ಉಂಟು ಮಾಡುತ್ತವೆ. ಇವುಗಳನ್ನು ಜಾರಿಗೆ ತರುವ ಮುನ್ನ ಜನರ ಆಕ್ಷೇಪಣೆಗಳ ಬಗ್ಗೆಯೂ ಆಲಿಸಿ, ಅವುಗಳನ್ನು ಪರಾಮರ್ಶಿಸಿ, ಜಾರಿಗೆ ತರಬೇಕು ಎಂದ ಅವರು, ಇಕೋ-ಸೆನ್ಸಿಟಿವ್ ಝೋನ್‌ನ ವ್ಯಾಪ್ತಿಯ ಪ್ರದೇಶವು ಯಾವ-ಯಾವ ಗ್ರಾಮಗಳಲ್ಲಿ, ಯಾವ ಯಾವ ಸರ್ವೇ ನಂಬರ್ ಒಳಗೊಂಡಿವೆ ಎಂಬುದರ ಬಗ್ಗೆ ನಿಖರ ಮಾಹಿತಿಯನ್ನು ಜನರಿಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಯು ಜಂಟಿ ಸರ್ವೆಯನ್ನು ಮಾಡಿ, ಇದರ ಗಡಿಯನ್ನು ಗುರುತಿಸಬೇಕಿದೆ ಎಂದ ಅವರು, ಪ್ರತೀ ಗ್ರಾಮಮಟ್ಟದಲ್ಲಿ ಈ ಕರಡು ವರದಿಯ ಬಗ್ಗೆ ಚರ್ಚಿಸಿ ವರದಿ ನೀಡುವುದು ಒಳಿತು ಎಂದರು

ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿ, ಯಾವುದೇ ವರದಿಯನ್ನು ಜಾರಿಗೆ ತರುವ ಮುನ್ನ ಜನರಿಗೆ ಆಗುವ ತೊಂದರೆಗಳು, ಅನುಕೂಲಗಳು ಹಾಗೂ ಸಿಗುವ ಸೌಲಭ್ಯಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಬೇಕು. ಕಸ್ತೂರಿ ರಂಗನ್ ವರದಿಯ ಜಾರಿಗೆ ಮುಂದಾಗಿರುವುದು ಕಾಡಂಚಿನ ಜನರಿಗೆ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅಥವಾ ವರದಿ ಜಾರಿ ಮಾಡಲು ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತರಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿರುತ್ತದೆ. ಈ ಕಾರ್ಯವನ್ನು ತಪ್ಪದೇ ಮಾಡಬೇಕು ಎಂದರು. ಸಭೆಯಲ್ಲಿ ಡಿ.ಎಫ್.ಓ ರುಥ್ರೇನ್ ಪಿ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎಎಸ್.ಪಿ ಸುಧಾಕರ್ ನಾಯಕ್, ಸಹಾಯಕ ಕಮೀಷನರ್ ರಶ್ಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.