ಕೇಮಾರಿನಲ್ಲಿ ಮಣ್ಣಿನ ಕ್ವಾರಿ ವಿರುದ್ಧ ಆಕ್ರೋಶ; ಭಾರೀ ಲಾರಿಗಳ ಸಂಚಾರ ಸ್ಥಗಿತಕ್ಕೆ ನಾಗರಿಕ ಹಿತರಕ್ಷಣಾ ವೇದಿಕೆ ಆಗ್ರಹ

0
13

ಕೇಮಾರು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಣ್ಣಿನ ಕ್ವಾರಿ ಹಾಗೂ ಮಣ್ಣು ಸಾಗಿಸುವ ಭಾರೀ ಲಾರಿಗಳ ಸಂಚಾರದಿಂದ ರಸ್ತೆ ಹದಗೆಟ್ಟು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿರುವ ಕೇಮಾರು ನಾಗರಿಕ ಹಿತರಕ್ಷಣಾ ವೇದಿಕೆ, ಕ್ವಾರಿ ಕಾರ್ಯಾಚರಣೆ ಮತ್ತು ಭಾರೀ ವಾಹನಗಳ ಸಂಚಾರವನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿದೆ.
ವೇದಿಕೆಯಿಂದ ಜಾಗದ ಮಾಲೀಕರು, ಗುತ್ತಿಗೆ ಸಂಸ್ಥೆಗೆ ಈಗಾಗಲೇ 9 ಷರತ್ತುಗಳನ್ನೊಳಗೊಂಡ ನೋಟಿಸ್ ನೀಡಿ, 7 ದಿನಗಳೊಳಗೆ ಲಿಖಿತ ರೂಪದಲ್ಲಿ ಹಿಂಬರಹ ನೀಡುವಂತೆ ಕಾಲಾವಕಾಶ ನೀಡಲಾಗಿತ್ತು. ನೋಟಿಸ್‌ಗೆ ಹಿಂಬರಹ ನೀಡದೆ ಸಮಸ್ಯೆಗಳಿಗೆ ಯಾವುದೇ ಪರಿಹಾರ ಒದಗಿಸದ ಹಿನ್ನೆಲೆಯಲ್ಲಿ ವೇದಿಕೆಯು ತಹಶೀಲ್ದಾರ್, ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ.
ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಮಾರು ಪ್ರದೇಶದ ಖಾಸಗಿ ಜಾಗದಲ್ಲಿ ನಡೆಯುತ್ತಿರುವ ಮಣ್ಣಿನ ಕ್ವಾರಿಯಿಂದ ಮಣ್ಣು ತುಂಬಿಕೊಂಡು ಭಾರೀ ಲಾರಿಗಳು ನಿರಂತರವಾಗಿ ಸಂಚರಿಸುತ್ತಿವೆ. ಇದರಿಂದ ಕೇಮಾರು–ಕೊಡ್ಯಡ್ಕ–ಮೂಡುಬಿದಿರೆ ರಸ್ತೆ ಸಂಪೂರ್ಣ ಹದಗೆಟ್ಟಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಭಾರೀ ವಾಹನಗಳ ಸಂಚಾರದಿಂದ ಸ್ಥಳೀಯ ವಾಹನಗಳ ಸುಗಮ ಓಡಾಟಕ್ಕೆ ಅಡ್ಡಿಯಾಗುತ್ತಿದ್ದು, ಶಾಲಾ ಮಕ್ಕಳು, ಸಾರ್ವಜನಿಕರು, ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಅಪಾಯದ ಆತಂಕವೂ ಹೆಚ್ಚಾಗಿದೆ ಎಂದು ವೇದಿಕೆ ಆರೋಪಿಸಿದೆ.
ಗ್ರಾಮಸ್ಥರಿಗೆ ತೊಂದರೆ ಉಂಟುಮಾಡುತ್ತಿರುವ ಮಣ್ಣಿನ ಕ್ವಾರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದರೊಂದಿಗೆ ಭಾರೀ ಲಾರಿಗಳ ಸಂಚಾರಕ್ಕೂ ಕೂಡಲೇ ಕಡಿವಾಣ ಹಾಕಬೇಕು ಎಂದು ಕೇಮಾರು ನಾಗರಿಕ ಹಿತರಕ್ಷಣಾ ವೇದಿಕೆ ಸಂಬಂಧಪಟ್ಟ ಇಲಾಖೆಗಳನ್ನು ಆಗ್ರಹಿಸಿದೆ.