ಪುತ್ತೂರು : ಪುತ್ತೂರು ಪ್ರೆಸ್ ಕ್ಲಬ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸರು ಮೂವರು ವ್ಯಕ್ತಿಗಳು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸೆಪ್ಟೆಂಬರ್ 1ರಂದು ಮಧ್ಯಾಹ್ನ ಪುತ್ತೂರು ಪ್ರೆಸ್ ಕ್ಲಬ್ ಮುಂಭಾಗದಲ್ಲಿ ಜನರ ಗುಂಪೊಂದು ಜಮಾಯಿಸಿ ಗಲಾಟೆ ನಡೆಸುತ್ತಿದೆ ಎಂಬ ಮಾಹಿತಿ ಪೊಲೀಸ್ ಇನ್ಸ್‌ಪೆಕ್ಟರ್ ಜಾನ್ಸನ್ ಡಿಸೋಜಾ ಅವರಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಕೆಲವರು ಪರಸ್ಪರ ವಾಗ್ವಾದದಲ್ಲಿ ತೊಡಗಿರುವುದು ಕಂಡುಬಂದಿದ್ದು, ಇದರಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಇನ್ಸ್‌ಪೆಕ್ಟರ್ ಅವರು ಸ್ಥಳದಲ್ಲಿದ್ದ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿ ಜಗಳವನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ಅವರು ವಾಗ್ವಾದ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಿದ ಆರೋಪದಡಿ ಮೂವರು ವ್ಯಕ್ತಿಗಳು ಹಾಗೂ ಇತರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

