ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ : ಸೆ. 5ರಿಂದ ಪ್ರಜಾಸೇವೆ ಅಭಿಯಾನ

0
33

ಬೆಂಗಳೂರು : ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಸ್ಥಳೀಯ ಮಟ್ಟದಲ್ಲೇ ಪರಿಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸೆಪ್ಟೆಂಬರ್ 5, 2026ರಿಂದ ರಾಜ್ಯಾದ್ಯಂತ ‘ಪ್ರಜಾಸೇವೆ ಅಭಿಯಾನ’ ಆರಂಭಿಸಲು ಮುಂದಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ತಿಂಗಳ ಪ್ರತಿ ಶನಿವಾರ ಸಾರ್ವಜನಿಕರ ಕುಂದುಕೊರತೆ ಆಲಿಸುವ ಸಭೆ ನಡೆಯಲಿದೆ. ಸಭೆ ನಡೆಯುವ ಸ್ಥಳದಲ್ಲೇ ‘ಗ್ರಾಮ ಒನ್’ ಮತ್ತು ‘ಕರ್ನಾಟಕ ಒನ್’ ಕೇಂದ್ರಗಳನ್ನು ಸ್ಥಾಪಿಸಿ, ಸಾರ್ವಜನಿಕರಿಂದ ಅರ್ಜಿ ಹಾಗೂ ದೂರುಗಳನ್ನು ಯಾವುದೇ ಶುಲ್ಕವಿಲ್ಲದೆ ಸ್ವೀಕರಿಸಲಾಗುತ್ತದೆ. ಇದಕ್ಕಾಗಿ ಅಗತ್ಯ ಕಂಪ್ಯೂಟರ್ ವ್ಯವಸ್ಥೆ ಹಾಗೂ ಸಿಬ್ಬಂದಿಯನ್ನು ಜಿಲ್ಲಾಧಿಕಾರಿಗಳು ನಿಯೋಜಿಸಲಿದ್ದಾರೆ.

ಎರಡು ವಿಭಾಗಗಳಲ್ಲಿ ದೂರುಗಳ ದಾಖಲು

ಸಭೆಯಲ್ಲಿ ಸಾರ್ವಜನಿಕರ ದೂರುಗಳನ್ನು ಎರಡು ವಿಭಾಗಗಳಲ್ಲಿ ದಾಖಲಿಸಲಾಗುತ್ತದೆ. ಹೊಸದಾಗಿ ಸಲ್ಲಿಕೆಯಾಗುವ ದೂರುಗಳನ್ನು ಒಂದು ವಿಭಾಗದಲ್ಲಿ ದಾಖಲಿಸಿದರೆ, IPGRS ಪೋರ್ಟಲ್‌ನಲ್ಲಿ ದಾಖಲಾಗಿದ್ದು 21 ದಿನಗಳ ಗಡುವಿನ ಬಳಿಕವೂ ಇತ್ಯರ್ಥವಾಗದ ಪ್ರಕರಣಗಳು ಹಾಗೂ ದೊರೆತ ಪರಿಹಾರದಿಂದ ದೂರುದಾರರು ಅತೃಪ್ತರಾಗಿರುವ ಪ್ರಕರಣಗಳನ್ನು ಮತ್ತೊಂದು ವಿಭಾಗದಲ್ಲಿ ಪರಿಗಣಿಸಲಾಗುತ್ತದೆ.

ಪ್ರತಿ ಬುಧವಾರ ಮೂರು ಹಂತಗಳಲ್ಲಿ ಪರಿಶೀಲನೆ

ಸ್ವೀಕರಿಸಿದ ಅರ್ಜಿ ಮತ್ತು ದೂರುಗಳ ವಿಲೇವಾರಿಗೆ ಪ್ರತಿ ಬುಧವಾರ ಮೂರು ಹಂತಗಳಲ್ಲಿ ಪರಿಶೀಲನಾ ಸಭೆ ನಡೆಯಲಿದೆ. ಬೆಳಗ್ಗೆ 9ರಿಂದ 11ರವರೆಗೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಲಿದೆ.

ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಉಪವಿಭಾಗ ಮಟ್ಟದಲ್ಲಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದ್ದು, ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪರಿಶೀಲನೆ ನಡೆಯಲಿದೆ.

ದೂರುಗಳ ಇತ್ಯರ್ಥದಿಂದ ತೃಪ್ತರಾಗದ ಸಾರ್ವಜನಿಕರಿಗೆ ಪರಿಶೀಲನಾ ಸಭೆಗಳಲ್ಲಿ ನೇರವಾಗಿ ಭಾಗವಹಿಸಿ, ಸಂಬಂಧಪಟ್ಟ ಅಧಿಕಾರಿಗಳ ಎದುರು ತಮ್ಮ ಅಹವಾಲು ಮಂಡಿಸಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರಿ ಯೋಜನೆಗಳ ಮಾಹಿತಿ

ಪ್ರಜಾಸೇವೆ ಅಭಿಯಾನದ ಸಂದರ್ಭದಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಇಲಾಖೆಗಳ ಐಇಸಿ ಅನುದಾನ ಬಳಸಿಕೊಳ್ಳುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮೂಲಕ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಜನರಿಗೆ ಹೆಚ್ಚಿನ ಮಾಹಿತಿ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ನೌಕರರಿಗೆ ಪರಿಹಾರ ರಜೆಗೆ ಅವಕಾಶ

ಅಭಿಯಾನದ ಹಿನ್ನೆಲೆಯಲ್ಲಿ ತಿಂಗಳ 2ನೇ ಮತ್ತು 4ನೇ ಶನಿವಾರ ಕರ್ತವ್ಯ ನಿರ್ವಹಿಸುವ ಗ್ರೂಪ್ ‘ಸಿ’ ಮತ್ತು ‘ಡಿ’ ನೌಕರರಿಗೆ ಜಿಲ್ಲಾಧಿಕಾರಿ ಹಂತದಲ್ಲೇ ಪರಿಹಾರ ರಜೆ (Compensatory CL) ನೀಡಲು ಅವಕಾಶ ಕಲ್ಪಿಸಲಾಗಿದೆ. ಗ್ರೂಪ್ ‘ಎ’ ಮತ್ತು ‘ಬಿ’ ನೌಕರರಿಗೆ ಪರಿಹಾರ ರಜೆಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು.