ಮಂಗಳೂರು ದಸರಾ ಮಹೋತ್ಸವಕ್ಕೆ ಡಿ.ಕೆ. ಶಿವಕುಮಾರ್‌ಗೆ ಅಧಿಕೃತ ಆಹ್ವಾನ

0
79

ಮಂಗಳೂರು : ಕರಾವಳಿಯ ಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿರುವ **‘ಮಂಗಳೂರು ದಸರಾ ಮಹೋತ್ಸವ’**ಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಅಕ್ಟೋಬರ್ 11ರಿಂದ 21ರವರೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದಿಂದ ಉತ್ಸವ ನಡೆಯಲಿದೆ. ಈ ಐತಿಹಾಸಿಕ ಉತ್ಸವವನ್ನು ಉದ್ಘಾಟಿಸುವಂತೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕ್ಷೇತ್ರಾಡಳಿತ ಸಮಿತಿಯ ವತಿಯಿಂದ ಆಹ್ವಾನ ನೀಡಲಾಯಿತು.

ಕ್ಷೇತ್ರಾಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಂಗಳೂರು ದಸರಾ ಮಹೋತ್ಸವದ ಉದ್ಘಾಟನೆಗೆ ಅಧಿಕೃತ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಅವರಿಗೆ ಅನುಗ್ರಹ ಪ್ರಸಾದ ನೀಡಿ ಗೌರವಿಸಲಾಯಿತು.

ಈ ವೇಳೆ ಮಂಗಳೂರು ದಸರಾ ಮಹೋತ್ಸವದ ಧಾರ್ಮಿಕ ಮಹತ್ವ, ಕುದ್ರೋಳಿ ಕ್ಷೇತ್ರದ ಇತಿಹಾಸ, ಕರಾವಳಿಯ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ನವದುರ್ಗೆಯರ ಆರಾಧನೆಯ ವಿಶೇಷತೆ ಕುರಿತು ಡಿ.ಕೆ. ಶಿವಕುಮಾರ್ ಅವರಿಗೆ ವಿವರಿಸಲಾಯಿತು.

ಮಂಗಳೂರು ದಸರಾ ಮಹೋತ್ಸವವು ಕರಾವಳಿಯ ಧಾರ್ಮಿಕ ನಂಬಿಕೆ, ಭಕ್ತಿ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಸಮ್ಮಿಲನವಾಗಿ ಪ್ರತಿವರ್ಷ ನಡೆಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದಲೂ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿಯೂ ಉತ್ಸವವನ್ನು ಅದ್ದೂರಿಯಾಗಿ ಆಯೋಜಿಸಲು ಕ್ಷೇತ್ರಾಡಳಿತ ಸಮಿತಿ ಸಿದ್ಧತೆ ನಡೆಸುತ್ತಿದೆ.

ಕುದ್ರೋಳಿ ಕ್ಷೇತ್ರದೊಂದಿಗೆ ತಮಗಿರುವ ವಿಶೇಷ ಸಂಬಂಧವನ್ನು ಉಲ್ಲೇಖಿಸಿದ ಡಿ.ಕೆ. ಶಿವಕುಮಾರ್, ನಾರಾಯಣ ಗುರುಗಳ ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ಪ್ರತಿಬಿಂಬಿಸುವ ಈ ಕ್ಷೇತ್ರಕ್ಕೆ ಭೇಟಿ ನೀಡುವುದು ಸಂತಸದ ಅನುಭವವಾಗಿದೆ ಎಂದು ಹೇಳಿದರು.

ಕರಾವಳಿಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುವ ಮಂಗಳೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು ಹೆಮ್ಮೆಯ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು. ಕ್ಷೇತ್ರದ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮಂಗಳೂರು ದಸರಾ ಮಹೋತ್ಸವದ ವೈಭವಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜೈರಾಜ್ ಹೆಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ ಹಾಗೂ ಕಿಶೋರ್ ದಂಡೆಕೇರಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾದ ವೇದಕುಮಾರ್, ಲೀಲಾಕ್ಷ ಕರ್ಕೇರ ಹಾಗೂ ಸೂರ್ಯಕಾಂತ್ ಜೆ. ಸುವರ್ಣ, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಉಪಾಧ್ಯಕ್ಷ ಪ್ರಭಾಕರ ಬಂಗೇರ, ಕೋಶಾಧಿಕಾರಿ ಯೋಗೀಶ್ ಕುಮಾರ್ ಮೂಲ್ಕಿ ಹಾಗೂ ಕಾರವಾರದ ನ್ಯಾಯವಾದಿ ಜಿ.ಟಿ. ನಾಯ್ಕ ಉಪಸ್ಥಿತರಿದ್ದರು.