ಮೂಡುಬಿದಿರೆ: ಮೂಡುಮಾರ್ನಾಡು ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಜೋನ್ ರೊನಾಲ್ಡ್ ಡಿಸೋಜ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸುದೀರ್ಘ ಹಾಗೂ ಸಾರ್ಥಕ ಸೇವೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
1988ರಲ್ಲಿ ಇರುವೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಆರಂಭಿಸಿದ ಅವರು, ಇರುವೈಲು, ಮೂಡುಬಿದಿರೆ ಮೈನ್ ಹಾಗೂ ಗುತ್ತು ಕರಿಂಜೆ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2005ರಲ್ಲಿ ಪ್ರೌಢಶಾಲಾ ಸಹಶಿಕ್ಷಕರಾಗಿ ಬಡ್ತಿ ಪಡೆದು, ಅದೇ ವರ್ಷದಿಂದ ಮೂಡುಮಾರ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು 37 ವರ್ಷಗಳ ಶೈಕ್ಷಣಿಕ ಸೇವೆ ಅವರದ್ದಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಹಲವು ಮಹತ್ವದ ಕೊಡುಗೆಗಳನ್ನು ನೀಡಿರುವ ಜೋನ್ ರೊನಾಲ್ಡ್ ಡಿಸೋಜ ಅವರು ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮೂಡುಬಿದಿರೆ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಮೂರು ವರ್ಷಗಳ ಕಾಲ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ಟಾಲ್ಪ್, ಇ.ಎಲ್.ಸಿ., ಸಮಾಜ ವಿಜ್ಞಾನ ಸೇರಿದಂತೆ ವಿವಿಧ ಶಿಕ್ಷಕರ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.
ಸಮಾಜ ವಿಜ್ಞಾನ ವಿಷಯದಲ್ಲಿ ನಿಧಾನಗತಿಯ ಕಲಿಕೆಯ ಮಕ್ಕಳಿಗೆ ಅನುಕೂಲವಾಗುವಂತೆ ‘ಸಮಾಜ ಬಲು ಸುಲಭ’, ‘ಸವಿಸೂತ್ರಗಳು’, ‘ಸವಿಮೌಲ್ಯ’ ಸೇರಿದಂತೆ ಹಲವು ಶೈಕ್ಷಣಿಕ ಸಾಹಿತ್ಯಗಳನ್ನು ರಚಿಸಿದ್ದಾರೆ. ಕೋವಿಡ್-19 ಸಂದರ್ಭದಲ್ಲಿ ಮಕ್ಕಳಿಗಾಗಿ ಆನ್‌ಲೈನ್ ರಸಪ್ರಶ್ನೆಗಳನ್ನು ರಚಿಸಿ ನಿರ್ವಹಿಸಿದ್ದು, ಶೈಕ್ಷಣಿಕ ವೀಡಿಯೋಗಳಿಗಾಗಿ ಯೂಟ್ಯೂಬ್ ಚಾನೆಲ್‌ನ್ನು ರಚಿಸಿದ್ದಾರೆ. ಅಲ್ಲದೆ, ಪಾಠಬೋಧನೆಗೆ ಅಗತ್ಯವಾದ ಇ-ಕಂಟೆಂಟ್‌ಗಳನ್ನು ಸಿದ್ಧಪಡಿಸಿ, ಕಂಪ್ಯೂಟರ್ ಹಾಗೂ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಣಾಮಕಾರಿ ಬೋಧನೆಗೆ ಒತ್ತು ನೀಡಿದ್ದಾರೆ.
ಶಾಲೆಯ ಅಭಿವೃದ್ಧಿಯಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದು, ದಾನಿಗಳ ಸಹಕಾರದ ಮೂಲಕ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಶಾಲಾ ಐಡಿ, ಧ್ವನಿವರ್ಧಕ, ಕುಡಿಯುವ ನೀರಿನ ಶೀತಲ ಯಂತ್ರ, ಊಟದ ಬಟ್ಟಲು, ಲೋಟ, ಬಿಸಿಯೂಟ ತಯಾರಿಕೆಗೆ ಮಿಕ್ಸಿ ಹಾಗೂ ಕುಕ್ಕರ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಲ್ಲಿ ಶ್ರಮಿಸಿದ್ದಾರೆ. ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಕೊಡಿಸುವಲ್ಲಿಯೂ ಸಹಕರಿಸಿದ್ದಾರೆ.
ಮೂಡುಮಾರ್ನಾಡು ಸರ್ಕಾರಿ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 9 ವರ್ಷಗಳ ಕಾಲ ಶೇ.100ರಷ್ಟು ಫಲಿತಾಂಶ ದಾಖಲಿಸಿರುವುದು ವಿಶೇಷ. ಕಳೆದ ಮೂರು ವರ್ಷಗಳಿಂದ ಸತತವಾಗಿ ಶೇ.100ರಷ್ಟು ಫಲಿತಾಂಶ ಪಡೆಯುತ್ತಿರುವ ತಾಲೂಕಿನ ಏಕೈಕ ಸರ್ಕಾರಿ ಪ್ರೌಢಶಾಲೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಜೋನ್ ರೊನಾಲ್ಡ್ ಡಿಸೋಜ ಅವರು ಬೋಧಿಸುವ ಸಮಾಜ ವಿಜ್ಞಾನ ವಿಷಯದಲ್ಲಿಯೂ ಹಲವು ವರ್ಷಗಳಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ, ನವೀನ ಬೋಧನಾ ವಿಧಾನಗಳು ಹಾಗೂ ಶಾಲೆಯ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆಗಾಗಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಸಮುದಾಯದಲ್ಲಿ ಸಂತಸಕ್ಕೆ ಕಾರಣವಾಗಿದೆ.

