ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೌಷ್ಟಿಕ ಆಹಾರದ ಕುರಿತು ವಿದ್ಯಾರ್ಥಿಗಳಿಗೆ ಅರಿವು

0
4

ಮಂಗಳೂರು: ಸೆಪ್ಟೆಂಬರ್ 2 2026 ರಂದು ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ–2026ರ ಅಂಗವಾಗಿ ಎಸ್‌ಸಿಎಸ್ ಪ್ರಥಮ ದರ್ಜೆ ಕಾಲೇಜಿನ ಆರೋಗ್ಯ, ನೈರ್ಮಲ್ಯ ಮತ್ತು ಕ್ಷೇಮಾಭಿವೃದ್ಧಿ ಘಟಕದ ವತಿಯಿಂದ “ನಾವು ತಿನ್ನುವುದೇ ನಮ್ಮ ಆರೋಗ್ಯದ ಪ್ರತಿಬಿಂಬ: ವಿದ್ಯಾರ್ಥಿಗಳಲ್ಲಿ ಪೌಷ್ಟಿಕ ಆಹಾರದ ಅರಿವು” ಎಂಬ ವಿಷಯದ ಕುರಿತು ಶೈಕ್ಷಣಿಕ ಹಾಗೂ ಆರೋಗ್ಯ ಜಾಗೃತಿ ವಿಚಾರ ಸಂಕಿರಣವನ್ನು ಕಾಲೇಜಿನ ಆಯೋಜಿಸಲಾಯಿತು.
ವಿದ್ಯಾರ್ಥಿ ಸಂಯೋಜಕಿ
ಕುಮಾರಿ ಮೋಕ್ಷಿತಾ ಅವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.
ಕರ್ನಾಟಕ ಆಯುರ್ವೇದ ವೈದ್ಯಕೀಯ ಕಾಲೇಜಿನ ಸ್ವಸ್ಥ ವೃತ್ತ ವಿಭಾಗದ ಸಹ ಪ್ರಾಧ್ಯಾಪಕಿ ಹಾಗೂ ಆರೋಗ್ಯ ಸಲಹೆಗಾರರಾದ ಡಾ. ಸುಕನ್ಯಾ ವಿ.ಪಿ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸಮತೋಲಿತ ಆಹಾರ, ಆರೋಗ್ಯಕರ ಆಹಾರ ಪದ್ಧತಿ, ಮಾನಸಿಕ ಕ್ಷೇಮ, ಉತ್ತಮ ನಿದ್ರೆಯ ಅಭ್ಯಾಸ ಹಾಗೂ ಆಹಾರ ಸುರಕ್ಷತೆ ಕುರಿತು ಮಾಹಿತಿ ನೀಡಿದರು.
ರಾಗಿ ಸೇರಿದಂತೆ ವಿವಿಧ ಸಿರಿಧಾನ್ಯಗಳು, ಬೇಳೆಕಾಳುಗಳು, ಹಣ್ಣುಗಳು, ತರಕಾರಿಗಳು, ಒಣ ಹಣ್ಣುಗಳು, ಮೊಟ್ಟೆ ಹಾಗೂ ಇಡ್ಲಿ, ದೋಸೆ, ಖಿಚಡಿ ಮುಂತಾದ ಸಾಂಪ್ರದಾಯಿಕ ಆಹಾರಗಳ ಪೌಷ್ಟಿಕ ಮಹತ್ವವನ್ನು ಅವರು ವಿವರಿಸಿದರು. ಜಂಕ್ ಫುಡ್, ತ್ವರಿತ ಆಹಾರ ಹಾಗೂ ಅತಿಯಾಗಿ ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅಯೋಡಿನ್‌ ಯುಕ್ತ ಉಪ್ಪಿನ ಬಳಕೆ, ಆಹಾರ ಬಲವರ್ಧನೆ, ಅಗತ್ಯ ಪೌಷ್ಟಿಕಾಂಶಗಳ ಸೇವನೆ, ಸಮರ್ಪಕ ನಿದ್ರೆ ಹಾಗೂ ಮೊಬೈಲ್‌ ಸೇರಿದಂತೆ ಪರದೆಯ ಬಳಕೆಯನ್ನು ನಿಯಂತ್ರಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು.
ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು, ಅಪೌಷ್ಟಿಕತೆ ಹಾಗೂ “ಅನೀಮಿಯಾ ಮುಕ್ತ ಭಾರತ” ಮತ್ತು “ಮಿಷನ್ ಪೋಷಣ್” ಮೊದಲಾದ ಪೌಷ್ಟಿಕಾಂಶ ಜಾಗೃತಿ ಕಾರ್ಯಕ್ರಮಗಳ ಕುರಿತು ಸಹ ಅವರು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಕಾರ್ಯಕ್ರಮವನ್ನು ಬಿ.ಕಾಂ ವಿದ್ಯಾರ್ಥಿನಿ ಕುಮಾರಿ ಬಿಂದು ನಿರೂಪಿಸಿದರು. ಬಿಬಿಎ ವಿಭಾಗದ ಉಪನ್ಯಾಸಕ್ಕೆ ಉಪನ್ಯಾಕಿ ಸಂಗೀತಾ ಶಾನುಭೋಗ ಸ್ವಾಗತಿಸಿದರು. ಬಿಬಿಎ ವಿದ್ಯಾರ್ಥಿನಿ ಕುಮಾರಿ ವೀಕ್ಷಿತಾ ವಂದನಾರ್ಪಣೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.