ಉಡುಪಿ : ಕೃಷ್ಣನೂರಿನ ಹಬ್ಬ ಕೃಷ್ಣಜನ್ಮಾಷ್ಟಮಿ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಾರ ವಹಿವಾಟು ಬಿರುಸು ಪಡೆದಿದೆ. ರಥಬೀದಿ ಸೇರಿದಂತೆ ನಗರದ ವಿವಿಧೆಡೆ ಖರೀದಿ ಭರಾಟೆ ಜೋರಾಗಿದೆ.
ವಿಶೇಷವಾಗಿ ರಥಬೀದಿಯಲ್ಲಿ ಹಾಸನ, ಚಿಕ್ಕಮಗಳೂರು ಮುಂತಾದ ಕಡೆಯಿಂದ ಆಗಮಿಸಿದ ಹೂವಿನ ವ್ಯಾಪಾರಿಗಳು ಸಾಲು ಸಾಲಾಗಿ ಜಮಾಗೊಂಡಿದ್ದು, ಸೇವಂತಿಗೆ, ಕಾಕಡ, ತುಳಸಿ ಮಾಲೆ, ಬಿಳಿಸೇವಂತಿಗೆ ಮಾರಾಟಮಾಡುತ್ತಿದ್ದಾರೆ.

ಎಲ್ಲಾ ಓಣಿಗಳಲ್ಲಿ ಅಂಗಡಿಗಳು
ಹೂ, ಹಣ್ಣಿನ ವ್ಯಾಪಾರಿಗಳಲ್ಲದೆ ಆಟಿಕೆ ಸಾಮಗ್ರಿ, ಫ್ಯಾನ್ಸಿ ಅಂಗಡಿಗಳ ಬೀದಿ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಗುರುವಾರ ಭಟ್ಕಳ, ಹುಬ್ಬಳ್ಳಿ, ಕುಂದಾಪುರ, ಮಂಗಳೂರಿನಿಂದ ವ್ಯಾಪಾರಿಗಳು ನಗರಕ್ಕೆ ಆಗಮಿಸಿ ತಮ್ಮ ತಮ್ಮ ಜಾಗವನ್ನು ನಿಗದಿಪಡಿಸಿಕೊಂಡಿದ್ದಾರೆ. ತೆಂಕಪೇಟೆ, ಬಡಗುಪೇಟೆ, ಸಂಸತ ಕಾಲೇಜು ರಸ್ತೆ, ಸೋದೆ ಮಠದ ಓಣಿ ಹೀಗೆ ರಥಬೀದಿ ಸಂಪರ್ಕಿಸುವ ಎಲ್ಲಾ ಒಳರಸ್ತೆಗಳಲ್ಲಿ ಬೀದಿ ವ್ಯಾಪಾರಿಗಳು ಮಾರಾಟದಲ್ಲಿ ತೊಡಗಿದ್ದಾರೆ. ನಗರದ ಶ್ರೀಕೃಷ್ಣಮಠ ರಥಬೀದಿಯಲ್ಲಿ ಪೂಜಾ ಸಮಾಗ್ರಿಗಳ ಖರೀದಿಯಲ್ಲಿ ಸಾರ್ವಜನಿಕರು ತೊಡಗಿಸಿಕೊಂಡಿದ್ದರು. ಉಂಡೆ, ಚಕ್ಕುಲಿ ತಯಾರಿಸಲು ಹಿಟ್ಟುಗಳ ಖರೀದಿಯೂ ಜೋರಾಗಿತ್ತು.
ಕೃಷ್ಣ ವೇಷ ಸ್ಪರ್ಧೆಗೆ 320ಕ್ಕೂ ಅಧಿಕ ನೊಂದಣಿ
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸೆ. 4ರಂದು ಶುಕ್ರವಾರ ಬೆಳಗ್ಗೆ 9:30ಕ್ಕೆ ಮಧ್ವಮಂಟಪದಲ್ಲಿ 1 ವರ್ಷದ ಒಳಗಿನ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ, ರಾಜಾಂಗಣದಲ್ಲಿ 3 ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, ಅನ್ನಧರ್ಮದಲ್ಲಿ 4 ರಿಂದ 6 ವರ್ಷ ಮಕ್ಕಳ ಬಾಲಕೃಷ್ಣ ಸ್ಪರ್ಧೆ, ಅನ್ನಬ್ರಹ್ಮದಲ್ಲಿ 7 ರಿಂದ 10 ವರ್ಷದೊಳಗಿನ ಮಕ್ಕಳ ಕಿಶೋರ ಕೃಷ್ಣ ಸ್ಪರ್ಧೆ ಆಯೋಜಿಸಲಾಗಿದೆ. ಈಗಾಗಲೇ ಮಠದಲ್ಲಿ ಕೃಷ್ಣ ಸ್ಪರ್ಧೆಗೆ 320ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ಪೊಲೀಸ್ ಭದ್ರತೆ
ಕೃಷ್ಣ ಮಠದಲ್ಲಿ ಅಷ್ಟಮಿ ಅಂಗವಾಗಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಭದ್ರತೆ ದೃಷ್ಟಿಯಿಂದ 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಠದ ಮುಂಭಾಗದಲ್ಲಿರುವ ಹೊರಠಾಣೆಯಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗಿದ್ದು, 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

