ಕೃಷಿ, ಹೈನುಗಾರಿಕೆ ಚಟುವಟಿಕೆಗೆ ಆರ್ಥಿಕ ಸಹಕಾರ : ಪ್ರತಿಕ್​ ಬಾಯಲ್

0
26

ಉಡುಪಿ : ಕೃಷಿ ಸೇರಿದಂತೆ ಹೈನುಗಾರಿಕೆ ಚಟುವಟಿಕೆ ಕೈಗೊಳ್ಳಲು ಅಗತ್ಯವಿರುವ ಸಾಲ ಸೌಲಭ್ಯಗಳನ್ನು ಅರ್ಹರಿಗೆ ಸಮರ್ಪಕವಾಗಿ ಒದಗಿಸಬೇಕು. ರೈತರು ಆರ್ಥಿಕವಾಗಿ ಸ್ವಾವಲಂಭಿಗಳಾಗಲು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​ ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್​ ಬ್ಯಾಂಕ್​ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಣಕಾಸಿನ ವಂಚನೆಯನ್ನು ತಡೆಗಟ್ಟಲು ವಹಿವಾಟು ಉದ್ದೇಶಗಳಿಗಾಗಿ 1600 ಫೋನ್​ ಸಂಖ್ಯೆ ಸರಣಿ ಮಾತ್ರ ಬಳಸುವಂತೆ ಬ್ಯಾಂಕುಗಳಿಗೆ ಆರ್​.ಬಿ.ಐ ನಿರ್ದೇಶನ ನೀಡಿದೆ. ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.

ಸೈಬರ್​ ವಂಚನೆಯಿಂದ ಹಣ ಕಳೆದುಕೊಂಡ ಗ್ರಾಹಕರು ಬ್ಯಾಂಕುಗಳಿಗೆ ವಿಚಾರಿಸಲು ಬಂದಾಗ ಸೌಜನ್ಯಯುತವಾಗಿ ವರ್ತಿಸಿ ತಿಳುವಳಿಕೆಗಳನ್ನು ನೀಡಬೇಕು. ನಿಯಮಾನುಸಾರ ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.

ಪ್ರಧಾನ ಮಂತ್ರಿ ವಿದ್ಯಾಲಕ್ಷಿ$್ಮ ಯೋಜನೆಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಸುಲಭವಾಗಿ ಶಿಕ್ಷಣ ಸಾಲ ನೀಡುವ ಯೋಜನೆಯಾಗಿದ್ದು, ಈ ಬಗ್ಗೆ ಜಿಲ್ಲೆಯ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಭೇಟಿ ಮಾಡಿ, ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದರು.

ಆರ್​.ಬಿ.ಐ ಎ.ಜಿ.ಎಂ ನಿಶಾ ಠಾಕೂರ್​ ಮಾತನಾಡಿ, ಸಣ್ಣ ಮೊತ್ತದ ವಂಚನಾತ್ಮಕ ಬ್ಯಾಂಕಿಂಗ್​ ವಹಿವಾಟುಗಳಿಂದ ವ್ಯಕ್ತಿಗೆ ನಷ್ಟವಾಗಿದ್ದರೆ ನಿವ್ವಳ ನಷ್ಟ ಮೊತ್ತದ ಶೇ.85 ರಷ್ಟು ಅಥವಾ 25,000 ರೂ. ಯಾವುದು ಕಡಿಮೆಯೋ ಅದನ್ನು ಜೀವಿತಾವಧಿಯಲ್ಲಿ ಒಂದು ಬಾರಿ ಮಾತ್ರ ಪರಿಹಾರ ನೀಡಲಾಗುವುದು ಎಂದರು.

ಕೆನರಾ ಬ್ಯಾಂಕ್​ ರೀಜನಲ್​ ಮ್ಯಾನೆಜರ್​ ತದಿನಾಡ ಶ್ರೀನಾಗ ಪೂರ್ಣಾನಂದ್​ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಜೂನ್​ ಅಂತ್ಯದವರೆಗೆ ಜಿಲ್ಲೆಯ ಒಟ್ಟು 440 ಶಾಖೆಗಳಲ್ಲಿ ಠೇವಣಿ 48715.93 ಕೋಟಿ ರೂ., ಮುಂಗಡ ಠೇವಣಿ 24,184.84 ಕೋಟಿ ಸೇರಿದಂತೆ ಒಟ್ಟು ಬ್ಯಾಂಕುಗಳಲ್ಲಿ 72,900.77 ಕೋಟಿ ರೂ. ವಹಿವಾಟು ನಡೆದಿದ್ದು, ಬ್ಯಾಂಕುಗಳ ಠೇವಣಿ ಅನುಪಾತ ಶೇ.49.64 ಇದೆ ಎಂದರು.

ಜಿಲ್ಲಾ ಲೀಡ್​ ಬ್ಯಾಂಕ್​ ಮ್ಯಾನೇಜರ್​ ಹರೀಶ್​ ಮಾತನಾಡಿ. ಕೇಂದ್ರ ಸರ್ಕಾರದ ಪಿ.ಎಂ. ಸ್ವನಿಧಿ ಯೋಜನೆ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕಾಗಿ ಸೆ. 1 ರಿಂದ 30ರವರೆಗೆ ಆಯೋಜಿಸಲಾಗುವ ಲೋಕ್​ ಕಲ್ಯಾಣ್​ ಮೇಳ ವಿಶೇಷ ಅಭಿಯಾನದ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ವ್ಯವಹಾರವನ್ನು ಅಭಿವೃದ್ಧಿ ಪಡಿಸಲು ಬ್ಯಾಂಕ್ಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಸಭೆಯಲ್ಲಿ ಎಸ್​.ಸಿ.ಡಿ.ಸಿ.ಸಿ ಬ್ಯಾಂಕ್​ನ ಅಸಿಸ್ಟೆಂಟ್​ ಜನರಲ್​ ಮ್ಯಾನೆಜರ್​ ರಾಜೇಶ್​ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.