ವಿದ್ಯಾರ್ಥಿಗಳ ಸವಾಲು, ಶೈಕ್ಷಣಿಕ ಸುಧಾರಣೆ ಕುರಿತು ಸಚಿವ ಸಂಪುಟ ಉಪಸಮಿತಿ ಮಹತ್ವದ ಸಭೆ

0
6

ನಾಡಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಶೈಕ್ಷಣಿಕ ಸುಧಾರಣೆಗಳ ಕುರಿತು ಪರಿಶೀಲಿಸಿ ಶಿಫಾರಸ್ಸು ಮಾಡಲು ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿಯ ಮಹತ್ವದ ಸಭೆಯು ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಜರುಗಿತು.

ಶಿಕ್ಷಣ ಎಂಬುದು ಕೇವಲ ಅಕ್ಷರ ಕಲಿಯುವುದಲ್ಲ, ಅದು ಮಕ್ಕಳ ಬದುಕಿಗೆ ದಾರಿದೀಪವಾಗಬೇಕು. ವಿದ್ಯಾರ್ಥಿಗಳ ಪ್ರತಿಯೊಂದು ಸವಾಲು ಮತ್ತು ಕನಸುಗಳಿಗೆ ಸ್ಪಂದಿಸಿ, ಅವರ ಅಭ್ಯುದಯಕ್ಕೆ ಅಗತ್ಯವಿರುವ ಶೈಕ್ಷಣಿಕ ಸುಧಾರಣೆಗಳನ್ನು ತರಲು ನಮ್ಮ ಸಂಪುಟ ಉಪಸಮಿತಿಯು ಇಂದು ಆಸ್ಥೆವಹಿಸಿ ಗಂಭೀರವಾಗಿ ಚರ್ಚಿಸಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ.

ಮುಂದಿನ ದಿನಗಳಲ್ಲಿ ನಾಡಿನ ವಿದ್ಯಾರ್ಥಿಗಳ ಆಶೋತ್ತರಗಳಿಗೆ ಸೂಕ್ತ ಅವಕಾಶ ಕಲ್ಪಿಸಿ, ಅವರ ಮನೋಬಲವನ್ನು ಸಶಕ್ತಗೊಳಿಸಿ, ಶೈಕ್ಷಣಿಕ ಹಾದಿಯಲ್ಲಿ ಸದೃಢರಾಗಿ ಸಾಗುತ್ತಾ ನೈತಿಕ ಜವಾಬ್ದಾರಿಗಳನ್ನು ಸ್ವಂತಿಕೆಯಿಂದ ನಿರ್ವಹಿಸುವ ಯುವ ಸಮೂಹವನ್ನು ಸಜ್ಜುಗೊಳಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.

ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ತೀರ್ಮಾನಗಳು ಹಾಗೂ ಗಮನಹರಿಸಲಾದ ಮುಖ್ಯ ವಿಷಯಗಳು

ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳಿಗೆ ಸಂಪೂರ್ಣ ತಡೆ ನೀಡುವುದು. ಎಲ್ಲಾ ಸರ್ಕಾರಿ ಪರೀಕ್ಷೆಗಳು ಹಾಗೂ ನೇಮಕಾತಿಗಳಿಗೆ ನಿರ್ದಿಷ್ಟ ಸಮಯದ ಕ್ಯಾಲೆಂಡರ್ ನಿಗದಿಪಡಿಸುವುದು.

ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಹಾಗೂ ಕೋಚಿಂಗ್ ಸೆಂಟರ್‌ಗಳ ಮನಸೋ ಇಚ್ಛೆ ವಸೂಲಿಗೆ ಕಟ್ಟುನಿಟ್ಟಿನ ನಿಯಮ ರೂಪಿಸಿ, ಹೆತ್ತವರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವುದು.

ಸರ್ಕಾರಿ ಶಾಲೆ, ಪಿಯು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಹುದ್ದೆ ಭರ್ತಿ, ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ ಹಾಗೂ ವಸತಿ ನಿಲಯಗಳ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವುದು.

ಪ್ರಸ್ತುತ ಮಾರುಕಟ್ಟೆ ಮತ್ತು ಉದ್ಯಮ ರಂಗದ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮದಲ್ಲಿ ಬದಲಾವಣೆ ತಂದು, ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಇಂಟರ್ನ್‌ಶಿಪ್ ಅವಕಾಶಗಳನ್ನು ಹೆಚ್ಚಿಸುವುದು.

ಪರೀಕ್ಷಾ ಒತ್ತಡ ನಿವಾರಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ಬಲಪಡಿಸುವುದು ಹಾಗೂ ಹಾಸ್ಟೆಲ್, ಕೋಚಿಂಗ್ ಸೆಂಟರ್‌ಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ನೆಮ್ಮದಿಗೆ ಅಗತ್ಯ ಕ್ರಮ ಕೈಗೊಳ್ಳುವುದು. ಎಸ್‌ಸಿ, ಎಸ್‌ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ತಲುಪಿಸುವುದು.
ಈ ಎಲ್ಲಾ ವಿಷಯಗಳ ಕುರಿತು ಶೀಘ್ರದಲ್ಲೇ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು.

ಈ ಮಹತ್ವದ ಸಭೆಯಲ್ಲಿ ಸಂಪುಟದ ಉಪಸಮಿತಿ ಸದಸ್ಯರುಗಳಾದ ಮಾನ್ಯ ಗೃಹ, ಇ-ಆಡಳಿತ ಹಾಗೂ ಐಟಿ-ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ, ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ, ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್, ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹಾಗೂ ರಾಜ್ಯಮಟ್ಟದ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.