ಮುಲ್ಕಿ : ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಧಾರ್ಮಿಕ ಕ್ಷೇತ್ರಗಳ ಮುಖ್ಯಸ್ಥರ ತುರ್ತು ಸಭೆ

0
22

ಧಾರ್ಮಿಕ ಕ್ಷೇತ್ರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಿ-ಡಿಸಿಪಿ ರವಿಶಂಕರ್

ಮುಲ್ಕಿ : ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಧಾರ್ಮಿಕ, ಸಂಘ ಸಂಸ್ಥೆ, ಸೊಸೈಟಿ, ಬ್ಯಾಂಕ್ ಸಂಸ್ಥೆಗಳ ಮುಖ್ಯಸ್ಥರ ತುರ್ತು ಸಭೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಂಗಳೂರು ಡಿಸಿಪಿ ರವಿಶಂಕರ್ ಮಾತನಾಡಿ ದೇವಸ್ಥಾನ ಹಾಗೂ ದೈವಸ್ಥಾನಗಳ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಲಾಕರ್ ನಲ್ಲಿ ಇಡುವ ವ್ಯವಸ್ಥೆ ಮಾಡಬೇಕು.

ಧಾರ್ಮಿಕ ಕ್ಷೇತ್ರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಿ ಹಾಗೂ ಕ್ಷೇತ್ರದ ಭದ್ರತೆ ಇರುವ ಸ್ಥಳದಲ್ಲಿ ಸಿಸಿಟಿವಿ ಡಿವಿಆರ್ ಇರಿಸಬೇಕು, ಧಾರ್ಮಿಕ ಕ್ಷೇತ್ರಗಳ ಸುತ್ತಲೂ ವಿದ್ಯುದ್ದೀಪದ ಬೆಳಕಿನ ವ್ಯವಸ್ಥೆ ಮಾಡಬೇಕು, ಮುಖ್ಯದ್ವಾರಗಳಿಗೆ ಅಲಾರಾಮ್ ವ್ಯವಸ್ಥೆ ಮಾಡಬೇಕು, ಧಾರ್ಮಿಕ ಕ್ಷೇತ್ರಗಳ ಕಾಣಿಕೆ ಡಬ್ಬಿ ಸಹಿತ ಇನ್ನಿತರ ವಂತಿಕೆ ಹಣವನ್ನು ಪ್ರತಿ ದಿನ ಬ್ಯಾಂಕುಗಳಿಗೆ ಠೇವಣಿ ಮಾಡಬೇಕು.

ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತೀ ಗ್ರಾಮದ ಬೀಟ್ ಪೊಲೀಸ್ ಜೊತೆ ಸಂಪರ್ಕದಲ್ಲಿರಬೇಕು ದೇವಸ್ಥಾನ ಅಥವಾ ದೈವಸ್ಥಾನ ಗಳಿಗೆ ಉತ್ತಮ ಗುಣಮಟ್ಟದ ಬೀಗ ವನ್ನು ಅಳವಡಿಸಬೇಕು.

ಧಾರ್ಮಿಕ ಕ್ಷೇತ್ರಕ್ಕೆ ಬರುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಕೂಡಲೇ ಮಾಹಿತಿ ನೀಡಬೇಕು. ದಾರ್ಮಿಕ ಕ್ಷೇತ್ರಗಳಿಗೆ ಸೆಕ್ಯೂರಿಟಿ ಗಾರ್ಡ್ ಹಾಗೂ ಸ್ವಯಂಸೇವಕರನ್ನು ನೇಮಿಸಬೇಕು ಎಂದರು.

ಮಂಗಳೂರು ಎಸಿಪಿ ಶ್ರೀಕಾಂತ್ ಮಾತನಾಡಿ ಜನರ ನಿರ್ಲಕ್ಷದಿಂದ ಕಳ್ಳರು ಬುದ್ಧಿವಂತರಾಗುತ್ತಿದ್ದಾರೆ. ಕಿಲ್ಪಾಡಿ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳವು ಪೊಲೀಸ್ ಇಲಾಖೆಗೆ ಸವಾಲಾಗಿದ್ದು ಅಪರಾಧಿಗಳನ್ನು ಖಂಡಿತಾ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿ ಜನರ ಸಹಕಾರ ಇದ್ದರೆ ಸಾಧನೆ ಮಾಡಿ ತೋರಿಸುತ್ತೇವೆ. ದೇವಸ್ಥಾನ ಹಾಗೂ ದೈವಸ್ಥಾನ ಇನ್ನಿತರ ಕ್ಷೇತ್ರಗಳಲ್ಲಿ ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಸಿ ಎಂದು ಮತ್ತೊಮ್ಮೆ ಕಿವಿ ಮಾತು ಹೇಳಿದರು.

ಸಭೆಯಲ್ಲಿ ಮುಲ್ಕಿ ಎಸ್ ಐ ರಾಘವೇಂದ್ರ ನಾಯಕ್, ಸಿಸಿ ಕ್ಯಾಮೆರಾ ಕಂಪನಿಯ ಕುಂದಾಪುರ ಸೈನ್ ಇನ್ ಸೆಕ್ಯೂರಿಟೀಸ್ ಸಂಸ್ಥೆಯ ಕೃಷ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸಭೆಯಲ್ಲಿ ವಿನೋದ್ ಸಾಲ್ಯಾನ್ ಬೆಳ್ಳಾಯರು ಹಾಗೂ ಸುಜಿತ್ ಸಾಲ್ಯಾನ್ ಮತ್ತಿತರರು ಮಾತನಾಡಿದರು.