ಉಡುಪಿ: ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯೆ ಕೃಷ್ಣ ಅವರು ಇಂದು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ದೇವಳದ ವತಿಯಿಂದ ಆರತಿ ಕೃಷ್ಣ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ದೇವಳದ ಅರ್ಚಕರಾದ ಮಧುಸೂಧನ್ ಉಪಾಧ್ಯಾಯ ಅವರು ಪ್ರಾರ್ಥನೆ ನೆರವೇರಿಸಿ, ಶ್ರೀ ದೇವರಿಗೆ ಆರತಿ ಬೆಳಗಿಸಿದರು. ಬಳಿಕ ದೇವಳದ ವತಿಯಿಂದ ಶ್ರೀ ದೇವರ ಪ್ರಸಾದ ಹಾಗೂ ಸ್ಮರಣಿಕೆಯನ್ನು ನೀಡಿ, ಫಲಪುಷ್ಪಗಳೊಂದಿಗೆ ಶಾಲು ಹೊದಿಸಿ ಆರತಿ ಕೃಷ್ಣ ಅವರನ್ನು ಗೌರವಿಸಲಾಯಿತು.
ದೇವಳದ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಿ ದೇವಳದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು. ಮನವಿಯನ್ನು ಸ್ವೀಕರಿಸಿದ ಆರತಿ ಕೃಷ್ಣ ಅವರು ದೇವಳದ ಅಭಿವೃದ್ಧಿ ಕಾರ್ಯಗಳಿಗೆ ಗರಿಷ್ಠ ಪ್ರಮಾಣದ ಅನುದಾನವನ್ನು ದೊರಕಿಸಿಕೊಡಲು ಅಗತ್ಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ದೇವಸ್ಥಾನದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದ ಅವರು, ದೇವಳದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಸ್ಥಾನದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಕಾಪಾಡಿಕೊಂಡು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮಾಧವ ಬನ್ನಂಜೆ, ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್, ದೇವಳದ ಅರ್ಚಕರಾದ ವಾಸುದೇವ ಉಪಾಧ್ಯಾಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರಭಾಕರ್ ಶೆಟ್ಟಿ, ದಿನೇಶ್ ಪುತ್ರನ್, ಶೇಖರ್ ಶೆಟ್ಟಿ, ಸುದೇಶ್ ಶೇಟ್, ರಾಜೇಶ್ ಬನ್ನಂಜೆ, ಶಮಿತಾ ಎಸ್. ಭಂಡಾರಿ, ವಿದ್ಯಾಲತಾ ಶೆಟ್ಟಿ, ದೇವಳದ ಮೆನೇಜರ್ ರವಿರಾಜ್ ಭಟ್, ಅರುಣ್ ಕುಮಾರ್ ಸೇರಿದಂತೆ ದೇವಳದ ಭಕ್ತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

