ಕಾಪು : ಶ್ರೀ ದುರ್ಗಾ ಸೇವಾ ಸಮಿತಿ, ಕುಂಜೂರು, ಪಣಿಯೂರು ಇವರ ಆಶ್ರಯದಲ್ಲಿ ಸೋಣ ಸಿಂಹ ಮಾಸದ 23ನೇ ದಿನದ ಪ್ರಯುಕ್ತ ಕುಂಜೂರಮ್ಮನಿಗೆ ಸೋಣ ತಿಂಗಳ ವಿಶೇಷ ಸೇವೆಯಾಗಿ ನೂರೆಂಟು ಮಂಗಳ ದೀಪಾರತಿ ಸಹಿತ ಸುಮನಸ ಪೂಜೆ ಸೆ.9ರಂದು ಬುಧವಾರ ರಾತ್ರಿ 7 ಗಂಟೆಗೆ ಕುಂಜೂರಮ್ಮನ ಸನ್ನಿಧಿಯಲ್ಲಿ ನಡೆಯಲಿದೆ.
ಈ ವಿಶೇಷ ಪೂಜೆಯಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕುಂಜೂರಮ್ಮನ ಕೃಪೆಗೆ ಪಾತ್ರರಾಗುವಂತೆ ಶ್ರೀ ದುರ್ಗಾ ಸೇವಾ ಸಮಿತಿ ಹಾಗೂ ವ್ಯವಸ್ಥಾಪನಾ ಸಮಿತಿ ಮನವಿ ಮಾಡಿದೆ.
ಮಂಗಳ ದೀಪಾರತಿಗೆ ಭಕ್ತರು ಯಥಾಶಕ್ತಿ ತುಪ್ಪ, ಎಳ್ಳೆಣ್ಣೆ ಹಾಗೂ ಬತ್ತಿಯನ್ನು ಸಮರ್ಪಿಸಬಹುದಾಗಿದೆ. ಶಾಸ್ತ್ರದ ಪ್ರಕಾರ ದೇವರಿಗೆ ಬೆಳಗುವ ದೀಪ ಹಾಗೂ ಆರತಿಯು ಸರ್ವ ಪಾಪಗಳನ್ನು ನಾಶಪಡಿಸಿ, ಜ್ಞಾನ ಪ್ರೇರಣೆಗೆ ಕಾರಣವಾಗಿ ಸದಾ ಮಂಗಲವನ್ನು ಕರುಣಿಸುತ್ತದೆ ಹಾಗೂ ಇಷ್ಟಾರ್ಥ ಸಿದ್ಧಿಗೆ ಅನುಕೂಲವಾಗುತ್ತದೆ ಎಂಬ ನಂಬಿಕೆ ಇದೆ.
ನೂರೆಂಟು ಮಂಗಳ ದೀಪಗಳ ದಿವ್ಯ ಬೆಳಕಿನಲ್ಲಿ ಕುಂಜೂರಮ್ಮನಿಗೆ ನಡೆಯುವ ಆರತಿಯ ವಿಶೇಷ ದೃಶ್ಯವನ್ನು ಕಣ್ಣುಂಬಿಕೊಂಡು ಧನ್ಯರಾಗಲು ಭಕ್ತರಿಗೆ ಇದು ಅಪೂರ್ವ ಅವಕಾಶವಾಗಲಿದೆ. ಭಕ್ತರು ರೂ.100 ಪಾವತಿಸಿ ಮಂಗಳ ದೀಪಾರತಿ ಸೇವೆಯಲ್ಲಿ ಭಾಗವಹಿಸಬಹುದಾಗಿದೆ.
ಪೂಜೆ ಹಾಗೂ ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆಯ ವ್ಯವಸ್ಥೆಯೂ ಮಾಡಲಾಗಿದೆ. ಪಣಿಯೂರಿನ ಸಮಾನ ಮನಸ್ಕ ಭಕ್ತಾದಿಗಳ ಸೇವಾ ಸಹಕಾರದೊಂದಿಗೆ ಅನ್ನಸಂತರ್ಪಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಅರ್ಚಕರು, ಪವಿತ್ರಪಾಣಿ ಸಿಬ್ಬಂದಿ ವರ್ಗ ಹಾಗೂ ಗ್ರಾಮ ಸೀಮೆಯ ಹತ್ತು ಸಮಸ್ತರು ಉಪಸ್ಥಿತರಿದ್ದು, ಭಕ್ತಾದಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಿದ್ದಾರೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುಂಜೂರಮ್ಮನ ಆಶೀರ್ವಾದ ಪಡೆದು, ನೂರೆಂಟು ಮಂಗಳ ದೀಪಾರತಿಯ ದಿವ್ಯ ನೋಟವನ್ನು ಕಣ್ತುಂಬಿಕೊಳ್ಳುವಂತೆ ಸಮಿತಿ ಮನವಿ ಮಾಡಿದೆ.

