ರಾಜ್ಯದಲ್ಲಿ ತುಳುವಿಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ಮತ್ತು ತುಳು ಭಾಷಾ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕ್ರಮ ಕೈಗೊಳ್ಳಬೇಕು : ಬೊಂಡಾಲ ಚಿತ್ತರಂಜನ್ ಶೆಟ್ಟಿ
ಮಂಗಳೂರು : ತುಳು ಭಾಷೆಯ ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಮಹತ್ವವನ್ನು ಪರಿಗಣಿಸಿ ತುಳು ಭಾಷೆಯನ್ನು ಭಾರತದ ಸಂವಿಧಾನದ8ನೇ ಪರಿಚ್ಛೆದಕ್ಕೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ ಒತ್ತಾಯಿಸಿದ್ದಾರೆ.
ತುಳು ಭಾಷೆಯನ್ನು 8ನೇ ಅನುಸೂಚಿಗೆ ಸೇರಿಸುವ ಬೇಡಿಕೆ ಇಂದಿನದ್ದಲ್ಲ. ಹಲವು ವರ್ಷಗಳಿಂದ ತುಳುನಾಡಿನ ಜನರು, ಸಾಹಿತಿಗಳು, ಭಾಷಾ ಹೋರಾಟಗಾರರು ಮತ್ತು ವಿವಿಧ ಸಂಘ ಸಂಸ್ಥೆಗಳು ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಬರುತ್ತಿವೆ. ಸಂಸತ್ತಿನಲ್ಲಿಯೂ ಹಲವು ಸಂದರ್ಭಗಳಲ್ಲಿ ತುಳು ಭಾಷೆಗೆ ಸಂವಿಧಾನಾತ್ಮಕ ಮಾನ್ಯತೆ ನೀಡುವಂತೆ ಒತ್ತಾಯಿಸಲಾಗಿದೆ.
2014ರಲ್ಲಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯದಿಂದ ತುಳು ಮತ್ತು ಕೊಡವ ಭಾಷೆಗಳನ್ನು 8ನೇ ಪರಿಚ್ಛೆದಕ್ಕೆ ಸೇರಿಸುವ ಪ್ರಸ್ತಾವನೆಗಳು ಕಳುಹಿಸಲ್ಪಟ್ಟಿದ್ದವು ಎಂಬುದು ರಾಜ್ಯಸಭೆಯ ಅಧಿಕೃತ ದಾಖಲೆಯಲ್ಲಿಯೇ ದಾಖಲಾಗಿದೆ.
ತುಳು ಭಾಷೆಯು ಕೇವಲ ಒಂದು ಸಂವಹನ ಮಾಧ್ಯಮವಲ್ಲ. ತುಳು ಸಾಹಿತ್ಯ,ಪಾರ್ದನ , ಜನಪದ ಪರಂಪರೆ, ಯಕ್ಷಗಾನ, ಭೂತಾರಾಧನೆ ಸೇರಿದಂತೆ ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯೊಂದಿಗೆ ತುಳು ಭಾಷೆ ಅವಿನಾಭಾವ ಸಂಬಂಧ ಹೊಂದಿದೆ. ಈ ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ತುಳುವರ ಸಾಂಸ್ಕೃತಿಕ ಅಸ್ಮಿತೆಯ ಸಂರಕ್ಷಣೆಯ ಭಾಗವಾಗಿದೆ.
2024ರಲ್ಲಿ ಕೇಂದ್ರ ಸರ್ಕಾರವೇ ತುಲು ಸೇರಿದಂತೆ ಹಲವು ಭಾಷೆಗಳನ್ನು 8ನೇ ಪರಿಚ್ಛೆದಕ್ಕೆ ಸೇರಿಸುವ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದು ತಿಳಿಸಿದೆ. ಆದರೆ ಇನ್ನೂ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಆದ್ದರಿಂದ ಕೇಂದ್ರ ಸರ್ಕಾರವು ಈ ವಿಚಾರವನ್ನು ಮತ್ತಷ್ಟು ವಿಳಂಬ ಮಾಡದೆ, ತುಳು ಸೇರಿದಂತೆ ಅರ್ಹ ಭಾಷೆಗಳ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು.
ಇದರ ಜೊತೆಗೆ ಕರ್ನಾಟಕದಲ್ಲಿ ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ಸರ್ಕಾರ ಸೂಕ್ತ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು.
2023ರ Karnataka Congress Election Manifestoನಲ್ಲಿ ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಪರಿಗಣಿಸಲು ಕ್ರಮ ಕೈಗೊಳ್ಳುವುದು ಮತ್ತು ತುಳು ಸಾಹಿತ್ಯ ಅಕಾಡೆಮಿಯನ್ನು ತುಳು ಭಾಷಾ ಅಭಿವೃದ್ದಿ ಪ್ರಾಧಿಕಾರ ಆಗಿ ಮೇಲ್ದರ್ಜೆಗೇರಿಸುವ ಭರವಸೆ ನೀಡಲಾಗಿತ್ತು. ಈ ಭರವಸೆಗಳನ್ನು ಸರ್ಕಾರ ಆದ್ಯತೆಯೊಂದಿಗೆ ಜಾರಿಗೆ ತರಬೇಕು.
ತುಳು ಭಾಷೆಯ ಅಭಿವೃದ್ಧಿಗಾಗಿ ಪ್ರತ್ಯೇಕ ತುಳು ಭಾಷಾ ಅಭಿವೃದ್ದಿ ಪ್ರಾಧಿಕಾರ ರಚಿಸಿ, ಭಾಷೆಯ ಅಧ್ಯಯನ, ಸಂಶೋಧನೆ, ಸಾಹಿತ್ಯ ಪ್ರಕಟಣೆ, ಡಿಜಿಟಲೀಕರಣ, ಶಿಕ್ಷಣ, ಅನುವಾದ, ಜನಪದ ಸಂರಕ್ಷಣೆ ಮತ್ತು ಯುವ ಪೀಳಿಗೆಯಲ್ಲಿ ತುಳು ಭಾಷೆಯ ಬಳಕೆಯನ್ನು ಉತ್ತೇಜಿಸಲು ಸಮಗ್ರ ಕಾರ್ಯಕ್ರಮ ರೂಪಿಸಬೇಕು.
ತುಳು ಭಾಷೆಗೆ Classical Language status ನೀಡುವ ಬೇಡಿಕೆಯನ್ನೂ ಪ್ರತ್ಯೇಕವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ತಂದು, 2024ರಲ್ಲಿ ಪರಿಷ್ಕರಿಸಲಾದ Classical Language ಮಾನದಂಡಗಳ ಆಧಾರದ ಮೇಲೆ ತುಳು ಭಾಷೆಯ ಅರ್ಹತೆಯನ್ನು ತಜ್ಞರ ಮೂಲಕ ಪರಿಶೀಲಿಸುವಂತೆ ಒತ್ತಾಯಿಸಬೇಕು. ಪ್ರಸ್ತುತ ಕೇಂದ್ರ ಸರ್ಕಾರದ ಮಾನ್ಯತೆ ಪಡೆದ 11 ಶಾಸ್ತ್ರೀಯ ಭಾಷೆಗಳು ಪಟ್ಟಿಯಲ್ಲಿ ತುಳು ಇಲ್ಲ.
ತುಳು ಭಾಷೆಯ ಬೇಡಿಕೆಯನ್ನು ಯಾವುದೇ ಪಕ್ಷದ ರಾಜಕೀಯ ವಿಷಯವಾಗಿ ನೋಡದೆ, ತುಳುನಾಡಿನ ಭಾಷೆ ಮತ್ತು ಸಂಸ್ಕೃತಿಯ ಹಕ್ಕಿನ ಪ್ರಶ್ನೆಯಾಗಿ ನೋಡಬೇಕು. ಪಕ್ಷಭೇದ ಮರೆತು ಎಲ್ಲ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತಂದು ಈ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಬೊಂಡಾಲ ಚಿತ್ತರಂಜನ್ ಶೆಟ್ಟಿ ತಿಳಿಸಿದ್ದಾರೆ.

