ಕಾರ್ಕಳದಲ್ಲಿ ಸೆ.13ರಂದು ‘ತೌಳವ ಯಕ್ಷಯನ’

0
17

ತುಳು ಯಕ್ಷಗಾನದ ಪರಂಪರೆ ಕುರಿತು ಉಪನ್ಯಾಸ, ಎರಡು ಯಕ್ಷಗಾನ ಪ್ರಸಂಗಗಳ ಪುಸ್ತಕ ಬಿಡುಗಡೆ

ಕಾರ್ಕಳ : ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ (ರಿ.) ವತಿಯಿಂದ ಸೆ.13ರಂದು ಕಾರ್ಕಳದ ಶ್ರೀ ವೇಣುಗೋಪಾಲ ಕೃಷ್ಣ ಸಭಾಭವನದಲ್ಲಿ ‘ತೌಳವ ಯಕ್ಷಯಾನ’ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಕಾರ್ಯಕ್ರಮದ ಅಂಗವಾಗಿ ನಡೆಯುವ ಯಕ್ಷಯಾನದ ಸಭಾ ಕಾರ್ಯಕ್ರಮದಲ್ಲಿ ‘ತುಳು ಯಕ್ಷಗಾನ ಬುಲೆದ್‌ ಬತ್ತಿನ ಸಾದಿ’ ಎಂಬ ವಿಷಯದ ಕುರಿತು ತುಳುನಾಡಿನ ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಉಪನ್ಯಾಸ ನೀಡಲಿದ್ದಾರೆ.

ಕೇಮಾರು ಸಾಂಧೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ (ರಿ.) ಅಧ್ಯಕ್ಷ ನಿಶ್ಚಿತ್ ರಾಮಕುಂಜ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್, ಗಾಯತ್ರಿ ಎಕ್ಸ್‌ಪೋರ್ಟ್ಸ್ ಹಾಗೂ ಕಾರ್ಕಳ ಟೈಗರ್ಸ್ ಸ್ಥಾಪಕ ಬೋಳ ಪ್ರಶಾಂತ್ ಕಾಮತ್, ಮಂದಾರ ಪ್ರತಿಷ್ಠಾನ ಟ್ರಸ್ಟ್ (ರಿ.) ಅಧ್ಯಕ್ಷ ರಾಜೇಶ್ ಭಟ್ ಮಂದಾರ, ಹಿರಿಯ ಯಕ್ಷಗಾನ ಕಲಾವಿದ ಡಾ. ತಾರಾನಾಥ್ ವರ್ಕಾಡಿ, ದಾನಿ ಹಾಗೂ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲ್, ತುಳುವ ಮಹಾಸಭೆಯ ಕರ್ನಾಟಕ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಅಂಬುರುಹ ಯಕ್ಷಸದನ ಪ್ರತಿಷ್ಠಾನ (ರಿ.), ಬೊಟ್ಟಿಕೆರೆ ಅಧ್ಯಕ್ಷೆ ಶೋಭಾ ಪುರುಷೋತ್ತಮ್ ಪೂಂಜ, ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ (ರಿ.) ಸ್ಥಾಪಕ ಮಹಿ ಮುಲ್ಕಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಎರಡು ತುಳು ಯಕ್ಷಗಾನ ಪ್ರಸಂಗಗಳ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು. ಮಂದಾರ ಕೇಶವ ಭಟ್ ರಚಿಸಿರುವ ‘ಭರತನ ಮೋಕೆ ಬೊಕ್ಕ ಮಾಯೆದ ಸೂರ್ಪನಕಿ’ ಹಾಗೂ ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜೆರ್ ರಚಿಸಿರುವ ‘ಕುಡಿಯನ ಕೊಂಬಿರೆಲ್’ ಕೃತಿಗಳು ಲೋಕಾರ್ಪಣೆಯಾಗಲಿವೆ.

ಬಳಿಕ ತುಳುನಾಡಿನ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ‘ಸಿರಿಕಿಷ್ಣ ಚಂದ್ರಪಾಲಿ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ತುಳು ಭಾಷೆ, ಯಕ್ಷಗಾನ ಹಾಗೂ ತೌಳವ ಸಂಸ್ಕೃತಿಯ ವೈಭವವನ್ನು ಪರಿಚಯಿಸುವ ಈ ಕಾರ್ಯಕ್ರಮಕ್ಕೆ ಸರ್ವ ತುಳುವರಿಗೆ ಸಂಘಟಕರು ಆತ್ಮೀಯ ಆಹ್ವಾನ ನೀಡಿದ್ದಾರೆ.