ಗುರುವಾಯನಕೆರೆ : ಪುತ್ತೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯೊಂದರ ಅಂಗಳಕ್ಕೆ ನುಗ್ಗಿದ ಘಟನೆ ಸೋಮವಾರ ಗುರುವಾಯನಕೆರೆಯ ಕುಲಾಲ ಮಂದಿರದ ಬಳಿ ನಡೆದಿದೆ.
ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಲು ಮುಂದಾದ ಸಂದರ್ಭದಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದ್ದು, ಬಳಿಕ ಬಸ್ ರಸ್ತೆ ಬದಿಗೆ ಚಲಿಸಿ ಅಬ್ದುಲ್ ರಹ್ಮಾನ್ ಎಂಬವರ ಮನೆಯ ಅಂಗಳಕ್ಕೆ ನೇರವಾಗಿ ನುಗ್ಗಿದೆ.
ಬಸ್‌ನಲ್ಲಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಏಕಾಏಕಿ ಬಸ್ ರಸ್ತೆ ಬಿಟ್ಟು ಮನೆಯ ಅಂಗಳಕ್ಕೆ ನುಗ್ಗಿದ ಪರಿಣಾಮ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯ ತೀವ್ರತೆಯಿಂದಾಗಿ ಸ್ಥಳೀಯರು ಕೂಡ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಬಸ್ ಮನೆಯ ಅಂಗಳಕ್ಕೆ ನುಗ್ಗಿದರೂ ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಅಥವಾ ಮನೆಯವರಿಗೆ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆಯಿಂದ ಬಸ್ ಹಾಗೂ ಮನೆಯ ಅಂಗಳಕ್ಕೆ ಹಾನಿಯಾಗಿರುವ ಸಾಧ್ಯತೆ ಇದ್ದು, ಹಾನಿಯ ಪ್ರಮಾಣದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಸಂಬಂಧಪಟ್ಟ ಅಧಿಕಾರಿಗಳ ಪರಿಶೀಲನೆಯ ಬಳಿಕ ತಿಳಿದುಬರಬೇಕಿದೆ.

