ಕಲೆ, ಸಾಹಿತ್ಯದಿಂದ ಮಾನವನ ಪರಿಜ್ಞಾನ ಹೆಚ್ಚುತ್ತದೆ-ಗಿರಿಜಾ ಮಾಲಿ ಪಾಟೀಲ್

0
28

ದಾವಣಗೆರೆ : ಕೆಲವು ಸಂಘ ಸಂಸ್ಥೆಗಳು ಪ್ರಚಾರಕ್ಕೆ ಸೀಮಿತವಾಗಿರುತ್ತದೆ. ಅನೇಕ ಸಂಘಟನೆಗಳು ಒಂದೆರೆಡು ವರ್ಷಗಳಿಗೆ ಇದ್ದು ನಂತರ ಮುಚ್ಚಿರುತ್ತದೆ. ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕಳೆದ 36 ವರ್ಷಗಳಿಂದ ನಿರಂತರ ಕಠಿಣ ಪರಿಶ್ರಮದಿಂದ ನಡೆಯುತ್ತಿರುವುದು ಶ್ಲಾಘನೀಯ. ಈ ಸಂಸ್ಥೆಯಿಂದ, ಕಲೆ, ಸಾಹಿತ್ಯ, ಶಿಕ್ಷಣ, ಸಂಗೀತ, ಸಂಸ್ಕೃತಿಯೊಂದಿಗೆ ಮಾನವನ ಪರಿಜ್ಞಾನ ಹೆಚ್ಚುತ್ತದೆ. ಕವನ ಕೇವಲ ಬರೆಯುವ ಬದಲು ಸಾಹಿತ್ಯಕ್ಕೆ ಒತ್ತು ಕೊಡಬೆಕು ಎಂದು ರಾಯಚೂರಿನ ಕವಯತ್ರಿ, ಸಾಹಿತಿ, ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಸಂಸ್ಥಾಪಕರಾದ ಗಿರಿಜಾ ಮಾಲಿ ಪಾಟೀಲ್ ಕಾವ್ಯಕುಂಚ 6ನೇ ಭಾಗದ ಕವನ ಸಂಕಲನ ಲೋಕಾರ್ಪಣೆ ಮಾಡಿ ತಮ್ಮ ಅನಿಸಿಕೆ ಹಂಚಿಕೊಂಡರು.

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗಳ ಆಶ್ರಯದಲ್ಲಿ ನಗರದ ಜಯದೇವ ವೃತ್ತದ ಹತ್ತಿರವಿರುವ ರೋಟರಿ ಬಾಲ ಭವನದಲ್ಲಿ ನಡೆದ ಈ ಸಮಾರಂಭದಲ್ಲಿ “ಕಾವ್ಯಕುಂಚ” ಕವನ ಸಂಕಲನದ ಪ್ರಧಾನದ ಸಂಪಾದಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಚಿಕ್ಕಮಗಳೂರಿನ ಛಾಯಾಗ್ರಾಹಕರು, ಸಾಹಿತಿಗಳು, ರಚಿತಾ ಮಹಿಳಾ ಸಮಾಜದ ಸಂಸ್ಥಾಪಕರಾದ ಕವಿತಾ ಗೋಪಾಲ್, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಹಿರಿಯ ಸಾಹಿತಿ, ಡಾ. ರಾಮಕೃಷ್ಣ ಶಿರೂರು, ಶಿವಮೊಗ್ಗದ ಕವಿಗಳು ಸಂಪದ ಸಾಲು ಪತ್ರಿಕೆಯ ಪ್ರಧಾನ ಸಂಪಾದಕರಾದ ವೆಂಕಟೇಶ್ ಎಸ್.ಸಂಪ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ ಉಪಸ್ಥಿತರಿದ್ದು ಮಾತನಾಡಿ, ಯಾವುದೇ ಸಂಸ್ಥೆಗು ಮಾಡದ ಸಾಂಸ್ಕೃತಿಕ ಚಟುವಟಿಕೆಗಳನ್ನು ಮೂರುವರೆ ದಶಕಗಳಿಂದ ನಡೆಯುತ್ತಿರುವುದು ಅದ್ಭುತ, ಆಶ್ಚರ್ಯ ಎಂದರು.

ಲಲಿತಾ ಕಲ್ಲೇಶ್ ಸ್ವಾಗತಿಸಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು. ಕವಿ, ಕವಯತ್ರಿಯರಿಗೆ ರಾಜ್ಯ ಮಟ್ಟದ ಕವಿಗೋಷ್ಠಿ ಗಳಿಗೆ ಅವಕಾಶ ಕೊಟ್ಟು ಎಲ್ಲರಿಗೂ ಕನ್ನಡ ತಾಯಿ ಭುವನೇಶ್ವರಿ ಸ್ಮರಣಿಕೆ ಕೊಟ್ಟು ಅಭಿನಂದನಾ ಪತ್ರಗಳನ್ನು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗಳ ಅಧ್ಯಕ್ಷರಾದ ವಾಸುದೇವ ಎಲ್. ರಾಯ್ಕರ್ ವಿತರಿಸಿದರು. ಕೊನೆಗೆ ಕಲಾಕುಂಚ ಮಹಿಳಾ ವಿಭಾಗದ ಸಮಿತಿ ಸದಸ್ಯರಾದ ಶಿಲ್ಪಾ ಉಮೇಶ್ ವಂದಿಸಿದರು.