ನಾಲ್ಕು ಹುಲಿವೇಷ ತಂಡಗಳು ಒಂದೇ ವೇದಿಕೆಯಲ್ಲಿ!”

ಮೂಡುಬಿದಿರೆ : ಮೊಸರು ಕುಡಿಕೆ ಉತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ ‘ಅಷ್ಟಮಿದ ಪಿಲಿಗೊಬ್ಬು’ ಕಾರ್ಯಕ್ರಮವು ಈ ಬಾರಿ ವಿಶೇಷವಾಗಿ ಗಮನ ಸೆಳೆಯಿತು. ಜವನೆರ್ ಬೆದ್ರ ಸಂಘಟನೆಯ ವತಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ನಾಲ್ಕು ಪ್ರಮುಖ ಹುಲಿವೇಷ ತಂಡಗಳು ಒಂದೇ ವೇದಿಕೆಯಲ್ಲಿ ಹೆಜ್ಜೆ ಹಾಕಿ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದವು.
ನಾಲ್ಕೂ ತಂಡಗಳು ಒಂದೇ ವೇದಿಕೆಯಲ್ಲಿ ಒಟ್ಟಾಗಿ ಹುಲಿವೇಷ ಪ್ರದರ್ಶನ ನೀಡಿರುವುದು ಮೂಡುಬಿದಿರೆಯ ಇತಿಹಾಸದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ವೈವಿಧ್ಯಮಯ ತಂಡಗಳ ಕಲಾವಿದರು ಒಂದೇ ವೇದಿಕೆಯಲ್ಲಿ ಒಂದಾಗಿ ಕುಣಿದದ್ದು ಕಲೆ, ಸಂಸ್ಕೃತಿ ಹಾಗೂ ಸಾಮರಸ್ಯದ ಪ್ರತೀಕವಾಗಿ ಮೂಡಿಬಂತು.
ಇದೇ ಸಂದರ್ಭದಲ್ಲಿ 1960ರ ದಶಕದಲ್ಲಿ ಹುಲಿವೇಷ ತಂಡದ ಕಲಾವಿದರಾಗಿ ಜನಪ್ರಿಯತೆ ಗಳಿಸಿದ್ದ ಸುಂದರ ದೇವಾಡಿಗ ಹಾಗೂ ಉದಯ ಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಪೊಳಲಿ ಟೈಗರ್ಸ್ ತಂಡದ ಮಾಲೀಕರಾದ ಸಂತೋಷ್ ಶೆಟ್ಟಿ ಅವರು ತಾಸೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಸದಸ್ಯರಾದ ನಾಗರಾಜ್ ಪೂಜಾರಿ, ಪುರಂದರ ದೇವಾಡಿಗ, ರಾಜೇಶ್ ಆಚಾರ್ಯ, ಗುತ್ತಿಗೆದಾರ ಗುರು ಒಂಟಿಕಟ್ಟೆ, ಪ್ರವೀಣ್ ಶೆಟ್ಟಿ, ಗಂಗಾಧರ ಶೆಟ್ಟಿ, ಪ್ರಸಾದ್ ದೇವಾಡಿಗ, ಅಜಿತ್, ಜವನೆರ್ ಬೆದ್ರ ಸಂಘಟನೆಯ ಸ್ಥಾಪಕ ಅಮರ್ ಕೋಟೆ, ಸಂಚಾಲಕ ರಂಜಿತ್ ಶೆಟ್ಟಿ, ಕಾರ್ಯದರ್ಶಿ ದಿನೇಶ್ ನಾಯ್ಕ್, ಉಪಾಧ್ಯಕ್ಷ ನಾರಾಯಣ ಪಡುಮಲೆ, ಜತೆ ಕಾರ್ಯದರ್ಶಿ ಸಂದೀಪ್ ಕೆಲ್ಲಪುತ್ತಿಗೆ, ಸುಮಂತ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೂಡುಬಿದಿರೆಯ ಹುಲಿವೇಷ ಪರಂಪರೆಯನ್ನು ಉಳಿಸಿ, ಬೆಳೆಸಿ, ವಿವಿಧ ತಂಡಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಜವನೆರ್ ಬೆದ್ರ ಫೌಂಡೇಶನ್ನ ಸ್ಥಾಪಕರಾದ ಅಮರ್ ಕೋಟೆ ಅವರ ಕನಸು ‘ಅಷ್ಟಮಿದ ಪಿಲಿಗೊಬ್ಬು’ ಮೂಲಕ ನನಸಾಯಿತು.

ನಾಲ್ಕು ತಂಡಗಳು – ಒಂದೇ ವೇದಿಕೆ – ಒಂದೇ ಸಂಭ್ರಮ; ‘ಅಷ್ಟಮಿದ ಪಿಲಿಗೊಬ್ಬು’ ಮೂಡುಬಿದಿರೆಯ ಹುಲಿವೇಷ ಪರಂಪರೆಗೆ ಹೊಸ ಅಧ್ಯಾಯ ಬರೆದಂತಾಯಿತು.
