ಉಳ್ಳಾಲ: ಹರೇಕಳ ಹಾಜಬ್ಬರಿಗೆ ಚುನಾವಣಾ ಅಧಿಕಾರಿಗಳ ನೋಟಿಸ್

0
16

ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿದ್ದರು.

ಹಳೆಯ ಮತದಾರರ ಪಟ್ಟಿಯಲ್ಲಿ ಹೆಸರು ಕೇವಲ ‘ಹಾಜಬ್ಬ’ ಎಂದು ದಾಖಲಾಗಿದ್ದು, ಪ್ರಸ್ತುತ ದಾಖಲೆಗಳಲ್ಲಿ ‘ಹರೇಕಳ ಹಾಜಬ್ಬ’ ಎಂದು ಇರುವುದರಿಂದ ಹೆಸರು ಹೊಂದಾಣಿಕೆ ವಿಚಾರವಾಗಿ ನೋಟಿಸ್ ಜಾರಿಯಾಗಿತ್ತು ಎನ್ನಲಾಗಿದೆ.

ಬಳಿಕ ಇದು ಕೇವಲ ದಾಖಲೆಗಳಲ್ಲಿನ ಹೆಸರು ವ್ಯತ್ಯಾಸದ ವಿಚಾರ ಎಂಬುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಜಬ್ಬ ಅವರ ಹರೇಕಳದ ಮನೆಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ನೋಟಿಸ್ ನೀಡಿದ್ದಕ್ಕೆ ಅಧಿಕಾರಿಗಳು ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.

ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಹರೇಕಳ ಹಾಜಬ್ಬ ಅವರು ಕಿತ್ತಳೆ ಹಣ್ಣು ಮಾರಾಟದ ಹಣದಿಂದ ಶಾಲೆ ನಿರ್ಮಿಸಿ, ಶಿಕ್ಷಣ ಸೇವೆಯ ಮೂಲಕ ದೇಶಾದ್ಯಂತ ‘ಅಕ್ಷರ ಸಂತ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.