ತಾಳೆ ಬೆಳೆ ಭವಿಷ್ಯದ ಬಂಗಾರ:- ರೈತನಿಗಿದು ಪರ್ಯಾಯ ವ್ಯವಸಾಯ

0
6

​ತಾಳೆ ಬೆಳೆ ಪ್ರದೇಶ ವಿಸ್ತರಣೆ ಮಹಾ ಆಂದೋಲನ ಮತ್ತು ತರಬೇತಿ ಕಾರ್ಯಕ್ರಮದ ವರದಿ

ಕುಂದಾಪುರ ತಾಲೂಕಿನ ಶಂಕರನಾರಾಯಣ ಸಮೀಪದ ಪಾಂಡುರಂಗ ನಾಯಕ ಅವರ ತಾಳೆ ತೋಟದಲ್ಲಿ ‘ತಾಳೆ ಬೆಳೆ ಪ್ರದೇಶ ವಿಸ್ತರಣೆ ಮಹಾ ಆಂದೋಲನ ಮತ್ತು ರೈತರಿಗೆ ತಾಳೆ ಬೆಳೆ ಕುರಿತು ತರಬೇತಿ ಕಾರ್ಯಕ್ರಮ’ ಯಶಸ್ವಿಯಾಗಿ ಜರುಗಿತು.

3F ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್, ಶ್ರೀ ಭಾರತೀ ಎಣ್ಣೆ ತಾಳೆ ಬೆಳೆಗಾರರ ಸಹಕಾರಿ ಸಂಘ ಹಾಗೂ ತೋಟಗಾರಿಕಾ ಇಲಾಖೆ ಕುಂದಾಪುರ ಇದರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

​ಅಡುಗೆ ಎಣ್ಣೆಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವುದು ಮತ್ತು ಆಮದು ಕಡಿಮೆ ಮಾಡಿ ರಫ್ತು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ದೇಶದ ಆರ್ಥಿಕ ಪ್ರಗತಿಗೆ ಕೃಷಿ ವಲಯದ ಕೊಡುಗೆ ಮಹತ್ವದ್ದು ಎಂದರು.

ಇದೇ ಸಂದರ್ಭದಲ್ಲಿ ಹೊಸದಾಗಿ ತಾಳೆ ಕೃಷಿ ಕೈಗೊಂಡ ರೈತರಿಗೆ ಗಿಡಗಳನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಾಜಿ ಕ್ಯಾಂಪೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ನಿರ್ದೇಶಕಿ ಮಮತಾ ಆರ್ ಶೆಟ್ಟಿ ಹಾಗೂ ಸಂಘದ ಅಧ್ಯಕ್ಷ ದಯಾನಂದ ಹೆಗ್ಗಡೆ ಉಪಸ್ಥಿತರಿದ್ದು ರೈತರಿಗೆ ಮಾರ್ಗದರ್ಶನ ನೀಡಿದರು.

ಉತ್ತಮ ತಾಳೆ ಕೃಷಿ ಪದ್ಧತಿ ಅನುಸರಿಸಿ ಅಧಿಕ ಇಳುವರಿ ಪಡೆದ ರೈತರಾದ ವಸಂತ್ ಕುಮಾರ್ ಶೇಟ್, ಲಕ್ಷ್ಮಿ ಗಣೇಶ ಶೆಟ್ಟಿ ಹಾಗೂ ಸುಬ್ರಹ್ಮಣ್ಯ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾದ ಕೆ. ಶ್ರೀಕಾಂತ್ ಕುಮಾರ್ ಮತ್ತು ಜಯಶೀಲ ಶೆಟ್ಟಿ ಅವರು ತಾಳೆ ಕೃಷಿಯಲ್ಲಿ ಉತ್ತಮ ಪದ್ಧತಿ ಹಾಗೂ ಗೊಬ್ಬರ ನಿರ್ವಹಣೆಯ ಕುರಿತು ತರಬೇತಿ ನೀಡಿದರು.

3F ಆಯಿಲ್ ಪಾಮ್ ಕಂಪನಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಏರಿಯಾ ಮ್ಯಾನೇಜರ್ ಕೃಷ್ಣ ವೈ.ಟಿ ಸೇರಿದಂತೆ ಇಲಾಖಾಧಿಕಾರಿಗಳು ಹಾಗೂ ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವು ರೈತರಲ್ಲಿ ತಾಳೆ ಕೃಷಿಯ ಕುರಿತು ಆಳವಾದ ಅರಿವು ಮೂಡಿಸುವುದರೊಂದಿಗೆ, ವೈಜ್ಞಾನಿಕ ಬೇಸಾಯ ಪದ್ಧತಿಗಳ ಮೂಲಕ ಅಧಿಕ ಇಳುವರಿ ಪಡೆಯಲು ಭರ್ಜರಿ ಪ್ರೇರಣೆ ನೀಡಿದೆ. ಒಟ್ಟಾರೆಯಾಗಿ, ಇಂತಹ ಆಂದೋಲನಗಳು ಕೃಷಿಕರ ಆರ್ಥಿಕ ಅಭಿವೃದ್ಧಿಗೆ ಬೆನ್ನೆಲುಬಾಗುವುದರ ಜೊತೆಗೆ, ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುವ ರಾಷ್ಟ್ರೀಯ ಗುರಿಗೆ ಸ್ಥಳೀಯ ಮಟ್ಟದಿಂದ ಮಹತ್ವದ ಕೊಡುಗೆಯನ್ನು ನೀಡಲಿವೆ.

-ಮಂದಾರ ರಾಜೇಶ್