
ಮಂಗಳೂರು: ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ–2026ರ ಅಂಗವಾಗಿ ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನ ಆಹಾರ, ಪೌಷ್ಟಿಕಾಂಶ ಮತ್ತು ಆಹಾರ ವಿಜ್ಞಾನ ವಿಭಾಗದ ವತಿಯಿಂದ ನಗರದ ಮಣ್ಣ ಗುಡ್ಡದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟಂಬರ್ 3 ರಂದು ವಿಸ್ತರಣಾ ಚಟುವಟಿಕೆಯನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಆಹಾರ, ಪೌಷ್ಟಿಕಾಂಶ ಮತ್ತು ಆಹಾರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಶಾಲಾ ಮಕ್ಕಳಿಗೆ ಸಮತೋಲಿತ ಆಹಾರ, ಆರೋಗ್ಯಕರ ಆಹಾರ ಪದ್ಧತಿ, ಹಣ್ಣು ಮತ್ತು ತರಕಾರಿಗಳ ಮಹತ್ವ, ಸಾಕಷ್ಟು ನೀರು ಸೇವನೆ, ವೈಯಕ್ತಿಕ ಸ್ವಚ್ಛತೆ ಹಾಗೂ ಜಂಕ್ ಫುಡ್ ಮತ್ತು ಸಕ್ಕರೆ ಹೆಚ್ಚಿರುವ ಪಾನೀಯಗಳ ಸೇವನೆಯನ್ನು ನಿಯಂತ್ರಿಸುವ ಅಗತ್ಯದ ಕುರಿತು ಅರಿವು ಮೂಡಿಸಿದರು.

ವಿದ್ಯಾರ್ಥಿಗಳು ಮಾಹಿತಿ ಪ್ರಧಾನ ಅರಿವು ಮೂಡಿಸುವ ಮಾತುಕತೆ, ಕಿರು ನಾಟಕ, ಭಾವಭಂಗಿ ಗೀತೆ, ಶೈಕ್ಷಣಿಕ ಆಟಗಳು ಹಾಗೂ ಪ್ರಶ್ನೋತ್ತರ ಕಾರ್ಯಕ್ರಮಗಳ ಮೂಲಕ ಪೌಷ್ಟಿಕಾಂಶದ ಮಹತ್ವವನ್ನು ಮಕ್ಕಳಿಗೆ ಸರಳ, ಆಸಕ್ತಿದಾಯಕ ಹಾಗೂ ಮನಮುಟ್ಟುವ ರೀತಿಯಲ್ಲಿ ತಿಳಿಸಿದರು. ಶಾಲಾ ಮಕ್ಕಳು ಆಟಗಳು ಮತ್ತು ಚರ್ಚೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ, ಕಾರ್ಯಕ್ರಮದುದ್ದಕ್ಕೂ ಹೆಚ್ಚಿನ ಆಸಕ್ತಿ ತೋರಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ನಳಿನಿ ಹಾಗೂ ಆಹಾರ, ಪೌಷ್ಟಿಕಾಂಶ ಮತ್ತು ಆಹಾರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಕಾರ್ಯಕ್ರಮ ಆಯೋಜನೆಯ ಪ್ರಯತ್ನವನ್ನು ಶ್ಲಾಘಿಸಿದರು. ಶಾಲಾ ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯ ಕುರಿತು ಜಾಗೃತಿ ಮೂಡಿಸುವ ವಿದ್ಯಾರ್ಥಿಗಳ ಪ್ರಯತ್ನವನ್ನು ಅವರು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಪ್ರೊ. ರೂಪ ರಾವ್ 3 ಬೋಧಕ ಸಿಬ್ಬಂದಿಗಳು ಮತ್ತು 30 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯ ಅರಿವು ಮೂಡಿಸುವುದು ಹಾಗೂ ಉತ್ತಮ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಪ್ರೇರೇಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಈ ವಿಸ್ತರಣಾ ಚಟುವಟಿಕೆಯ ಮೂಲಕ ಪೌಷ್ಟಿಕ ಆಹಾರದ ಮಹತ್ವವನ್ನು ಮಕ್ಕಳಿಗೆ ತಿಳಿಸುವುದರ ಜೊತೆಗೆ, ಆರೋಗ್ಯಕರ ಆಹಾರ ಆಯ್ಕೆಗಳ ಕುರಿತು ಅವರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
