ಬೆಳ್ಳಾರೆ ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿನಿಯರ ಬಟ್ಟೆ ಕಳವು : ಆರೋಪಿ ಅರೆಸ್ಟ್!

0
67

ಪುತ್ತೂರು : ಬೆಳ್ಳಾರೆ ಸರ್ಕಾರಿ ವಿದ್ಯಾರ್ಥಿನಿಲಯಕ್ಕೆ ಅತಿಕ್ರಮ ಪ್ರವೇಶಿಸಿ, ವಿದ್ಯಾರ್ಥಿನಿಯರು ಒಣಗಿಸಲು ಹಾಕಿದ್ದ ಬಟ್ಟೆಗಳನ್ನು ಕಳವು ಮಾಡಿದ ಆರೋಪದ ಮೇಲೆ ಓರ್ವನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪುತ್ತೂರು ಕೊಳ್ತಿಗೆ ನಿವಾಸಿ ಕೆ. ರಾಮಚಂದ್ರ (35) ಎಂದು ಗುರುತಿಸಲಾಗಿದೆ.

ಬೆಳ್ಳಾರೆ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಮೇಲ್ವಿಚಾರಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫಿರ್ಯಾದಿದಾರರು, ಸೆಪ್ಟೆಂಬರ್ 2ರಂದು ಬೆಳಗ್ಗೆ ವಿದ್ಯಾರ್ಥಿನಿಯರು ಒಣಗಿಸಲು ಹಾಕಿದ್ದ ಕೆಲವು ಬಟ್ಟೆಗಳು ಕಾಣೆಯಾಗಿರುವುದನ್ನು ಗಮನಿಸಿದ್ದರು. ಈ ಕುರಿತು ವಿದ್ಯಾರ್ಥಿನಿಯರು ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದರು.

ಬಟ್ಟೆಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಲಯದಲ್ಲಿರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸೆಪ್ಟೆಂಬರ್ 2ರಂದು ಬೆಳಗಿನ ಜಾವ ಅಪರಿಚಿತ ಯುವಕನೋರ್ವ ವಿದ್ಯಾರ್ಥಿನಿಲಯದ ಆವರಣಕ್ಕೆ ಅತಿಕ್ರಮ ಪ್ರವೇಶಿಸಿರುವುದು ಕಂಡುಬಂದಿದೆ. ಬಳಿಕ ವಿದ್ಯಾರ್ಥಿನಿಯರು ಒಣಗಿಸಲು ಹಾಕಿದ್ದ ಬಟ್ಟೆಗಳಲ್ಲಿ ಕೆಲವು ಬಟ್ಟೆಗಳನ್ನು ತೆಗೆದುಕೊಂಡು ಆತ ಅಲ್ಲಿಂದ ತೆರಳಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಈ ಕುರಿತು ಸೆಪ್ಟೆಂಬರ್ 5ರಂದು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಸಿಸಿ ಕ್ಯಾಮರಾ ದೃಶ್ಯಾವಳಿ ಸೇರಿದಂತೆ ಲಭ್ಯ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಅತಿಕ್ರಮ ಪ್ರವೇಶಿಸಿ ಕಳವು ಮಾಡಿರುವ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.